ಮಡಿಕೇರಿ,ಅ. 17 (DaijiworldNews/AK): ಕೊಡಗಿನ ಕುಲದೇವಿ, ನಾಡಿನ ಜೀವನದಿ ಮಾತೆ ಕಾವೇರಿ ನಿಗಧಿಯಂತೆ ಮಕರ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು.

ಬೆಳಗ್ಗೆ 11:30 ಗಂಟೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು.
ಮತ್ತೊಂದೆಡೆ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿಮೀ ದೂರದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ಕಾವೇರಿ ಮಾತೆಯನ್ನ ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.
ತೀರ್ಥೋದ್ಭವದ ಸಮಯ ಹತ್ತಿರವಾಗಿತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಕ್ತರೆಲ್ಲರೂ ಉಕ್ಕಿ ಬಾ ತಾಯೆ ಎಂದು ಕಾವೇರಿ ಮಾತೆಯನ್ನ ಜಪಿಸುತ್ತಿದ್ದರು. ನಿಗದಿತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ಬಳಿಕ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಿದರು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಭಕ್ತಿಭಾವ ಮೆರೆದರು.