ಬೆಂಗಳೂರು,ಅ.17 (Daijiworld News/TA): ಬೆಂಗಳೂರು-ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಘಟನೆ ನಡೆದಿದೆ. ಬೆಂಗಳೂರಿನಿಂದ ರಾಯಚೂರಿಗೆ ಹೊರಟಿದ್ದ ಖಾಸಗಿ ಬಸ್ನಲ್ಲಿ ಮಧ್ಯರಾತ್ರಿ 2:30ರ ಸಮಯದಲ್ಲಿ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡು, ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಈ ಬಸ್ನ ಟೈರ್ ಬ್ಲಾಸ್ಟ್ ಆಗಿದ್ದೇ ಬೆಂಕಿಗೆ ಕಾರಣವಾಗಿದೆ ಎನ್ನಲಾಗಿದೆ. ಟೈರ್ ಬ್ಲಾಸ್ಟ್ ಆದ ತಕ್ಷಣವೇ ಬಸ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬಸ್ ಭಸ್ಮವಾಗಿದೆ. ಅದೃಷ್ಟವಶಾತ್, ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಸಮಯಕ್ಕೆ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಸ್ಸಿನಲ್ಲಿ ಹಬ್ಬಕ್ಕಾಗಿ ಊರಿಗೆ ಹೊರಡುತ್ತಿದ್ದ ವಿದ್ಯಾರ್ಥಿಗಳು ಸಹ ಇದ್ದರು. ಆದರೆ, ಅವರೆಲ್ಲರ ಪ್ರಮಾಣಪತ್ರಗಳು, ಲ್ಯಾಪ್ಟಾಪ್, ಮೊಬೈಲ್, ದುಬಾರಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಪ್ರಮಾಣಿಕರು ಆರೋಪಿಸುತ್ತಿರುವಂತೆ, ಬಸ್ಸಿನಲ್ಲಿ ಸುಟ್ಟ ವಾಸನೆ ಬರುತ್ತಿದ್ದರೂ ಚಾಲಕ ಬಸ್ ನಿಲ್ಲಿಸಲು ತಡಮಾಡಿದ ಎನ್ನಲಾಗಿದೆ. ಪ್ರಯಾಣಿಕರ ಪ್ರಕಾರ, ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ ಬಸ್ಸಿನ ಉಳಿದ ಭಾಗದಲ್ಲಿ ಬೆಂಕಿಯನ್ನು ನಂದಿಸಿದ್ದಾರೆ. ಈ ಅವಘಡವು ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು.