ಬೆಂಗಳೂರು,,ಅ. 17 (DaijiworldNews/AK): ನಮ್ಮಲ್ಲಿ ಭಯ ಹುಟ್ಟಿಸಲು ಸರಕಾರ ನನ್ನ ಮನೆಯ ಬೆಂಗಾವಲು ರಕ್ಷಕರನ್ನು ವಾಪಸ್ ಕರೆಸಿಕೊಂಡಿದೆ; ಈ ಮೂಲಕ ಸರಕಾರ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮನೆಗೆ 3 ಜನ ಬೆಂಗಾವಲು ರಕ್ಷಕರನ್ನು ನೀಡಿದ್ದರು. ಇದು ನಮಗೆ ಕೊಡಬೇಕಾದ ಭದ್ರತೆ ಎಂದು ನುಡಿದರು. ವಾಪಸ್ ಪಡೆಯುವ ಆದೇಶದ ಹಿಂದೆ ಪ್ರಿಯಾಂಕ್ ಖರ್ಗೆ, ಎಲ್ಲರೂ ಇದ್ದಾರೆ ಎಂದು ದೂರಿದರು. ಸರಕಾರ ಈ ಕ್ರಮ ಜರುಗಿಸಲು ಕಾರಣವೇನು? ರಾಜ್ಯ ವರ್ಗೀಕೃತ ಭದ್ರತಾ ಪುನರ್ ವಿಮರ್ಶಣಾ ಸಮಿತಿ ಈ ಆದೇಶ ಮಾಡಿದೆ. ನನಗೇನಾದರೂ ಆದರೆ, ಸರಕಾರ ಎಷ್ಟು ಹೊಣೆಯೋ ಪ್ರಿಯಾಂಕ್ ಖರ್ಗೆಯವರ ಕುಟುಂಬವೂ ಅಷ್ಟೇ ಹೊಣೆ ಎಂದು ಎಚ್ಚರಿಸಿದರು. ನಾನು ವಿಪಕ್ಷ ನಾಯಕ ಆಗಿದ್ದು ಸರಕಾರದ ನ್ಯೂನತೆ, ಭ್ರಷ್ಟಾಚಾರವನ್ನು ಹೊರಕ್ಕೆ ತರುವ ಜವಾಬ್ದಾರಿ ಪಡೆದಿದ್ದೇನೆ ಎಂದರು.
ಕಾರು ಮತ್ತಿತರ ಸೌಲಭ್ಯವನ್ನು ವಾಪಸ್ ಕೊಡುವೆ..
ಬೆಂಗಾವಲು ರಕ್ಷಕರನ್ನು ವಾಪಸ್ ಪಡೆಯಲು ಯಾರು ಕಾರಣರೆಂದು ಮುಖ್ಯಮಂತ್ರಿ, ಗೃಹ ಸಚಿವರು ಉತ್ತರಿಸಬೇಕು. ಇಲ್ಲವಾದರೆ ನನಗೆ ಕೊಟ್ಟ ಕಾರು ಮತ್ತಿತರ ಸೌಲಭ್ಯವನ್ನು ವಾಪಸ್ ಕೊಡುವೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಉಳಿದ ಅಂಗರಕ್ಷಕರನ್ನೂ ವಾಪಸ್ ಕಳಿಸುವೆ; ನನಗೆ ಯಾವ ರಕ್ಷಣೆಯೂ ಬೇಕಿಲ್ಲ; ನನಗೇನೇ ಆದರೂ ಖರ್ಗೆ ಕುಟುಂಬ ಮತ್ತು ಈ ಸರಕಾರವೇ ಕಾರಣ ಎಂದು ಎಚ್ಚರಿಸಿದರು.
ಈ ಸರಕಾರ ನಮ್ಮನ್ನು ಟಾರ್ಗೆಟ್ ಮಾಡಿ ನಮ್ಮನ್ನು ಮುಗಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು. ಪ್ರಿಯಾಂಕ್ ಖರ್ಗೆಯವರಿಗೆ ಬೆದರಿಕೆ ಕರೆ ಬಂದಿತ್ತು; ರೆಕಾರ್ಡ್ ಮಾಡಿದ್ದರು. ದೂರು ಕೊಡುವ ಮೊದಲೇ ಬಂಧನ ಆಗಿದೆ. ಅವರ ಮನೆ ಮುಂದೆ ಇನ್ನಷ್ಟು ಭದ್ರತೆ ಹೆಚ್ಚಿಸಿದ್ದಾರೆ. ನನ್ನನ್ನು ಜೀವಂತ ಸುಟ್ಟು ಹಾಕುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದನ್ನು, ಬೆದರಿಕೆ ಕರೆ ಬಂದಿದ್ದನ್ನು ತೋರಿಸಿದ್ದೇನೆ. ಆದರೆ, ನನ್ನ ಭದ್ರತೆ ವಾಪಸ್ ಪಡೆದು ಸಚಿವರ ಭದ್ರತೆ ಹೆಚ್ಚಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನನ್ನ ಹಿಂದೆ ನನ್ನ ಸಮಾಜ ಇದೆ. ವಿಪಕ್ಷ ನಾಯಕನಾಗಿ ಕ್ಯಾಬಿನೆಟ್ ದರ್ಜೆ ನನ್ನದು. ಈಗ ಮಹದೇವಪ್ಪನವರ ರಕ್ಷಣೆ ಹೆಚ್ಚಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಭದ್ರತೆ ಹೆಚ್ಚಿಸಿದ್ದಾರೆ. ಇವಕ್ಕೆ ನನ್ನ ಅಭ್ಯಂತರ ಇಲ್ಲ. ಬೆದರಿಕೆ ನನಗಿದ್ದರೂ ನನ್ನ ಭದ್ರತೆ ವಾಪಸ್ ಪಡೆಯಲು ಕಾರಣವೇನು? ಎಂದರು. ಈ ಬೆದರಿಕೆ ಇರುವುದೇ ಸರಕಾರದಿಂದ ಎಂದು ಸಾಬೀತಾಗುತ್ತಿದೆ ಎಂದು ವಿಶ್ಲೇಷಿಸಿದರು. ಇದನ್ನು ಖಂಡಿಸುತ್ತೇನೆ ಎಂದರು.