ಲಕ್ನೋ, ಅ. 18 (DaijiworldNews/AA): 'ಪಾಕಿಸ್ತಾನದ ಪ್ರತಿಯೊಂದು ಭೂಪ್ರದೇಶವೂ ಈಗ ನಮ್ಮ ಬ್ರಹ್ಮೋಸ್ನ ವ್ಯಾಪ್ತಿಯಲ್ಲಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೂಲಕ ಭಾರತ ತನ್ನ ಶತ್ರುಗಳನ್ನು ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ' ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್ಗೆ ಹಸಿರು ನಿಶಾನೆ ನೀಡಿದರು. ಬಳಿಕ ಮಾತನಾಡಿದ ಅವರು, "ಆಪರೇಷನ್ ಸಿಂಧೂರ ಇದು ಕೇವಲ ಟ್ರೇಲರ್ ಮಾತ್ರ. ಆಪರೇಷನ್ ಸಿಂಧೂರ ಗೆಲುವು ಒಂದು ಸಣ್ಣ ಘಟನೆಯಲ್ಲ" ಎಂದು ಹೇಳಿದ್ದಾರೆ.
"ಗೆಲುವು ನಮಗೆ ಅಭ್ಯಾಸವಾಗಿದೆ, ನಮ್ಮ ವಿರೋಧಿಗಳು ಬ್ರಹ್ಮೋಸ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ, ಬದಲಾಗಿ ಭಾರತದ ಬೆಳೆಯುತ್ತಿರುವ ಸ್ಥಳೀಯ ಸಾಮರ್ಥ್ಯಗಳ ಸಂಕೇತವಾಗಿದೆ. ವೇಗ, ನಿಖರತೆ ಮತ್ತು ಶಕ್ತಿಯ ಈ ಸಂಯೋಜನೆಯು ಬ್ರಹ್ಮೋಸ್ ಅನ್ನು ವಿಶ್ವದ ಅತ್ಯುತ್ತಮ ಕ್ಷಿಪಣಿಗಳಲ್ಲಿ ಒಂದನ್ನಾಗಿ ಮಾಡುತ್ತಿದೆ. ಬ್ರಹ್ಮೋಸ್ ಭಾರತೀಯ ಸಶಸ್ತ್ರ ಪಡೆಗಳ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಭಾರತ ತನ್ನ ಭದ್ರತಾ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ" ಎಂದರು.
ನಂತರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, "ಭಾರತವು ಈಗ ತನ್ನ ಭದ್ರತಾ ಅಗತ್ಯಗಳನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತದ ತನ್ನ ಸ್ನೇಹಪರ ರಾಷ್ಟ್ರಗಳ ಭದ್ರತಾ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್ಗೆ ಚಾಲನೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಪ್ರತಿಜ್ಞೆಯನ್ನು ಈಡೇರಿಸುವ ಅದೃಷ್ಟಶಾಲಿ ನಾನು. ಇದು ಆತ್ಮನಿರ್ಭರದ ಅಡಿಪಾಯ" ಎಂದು ತಿಳಿಸಿದರು.