ನವದೆಹಲಿ, ಅ. 18 (DaijiworldNews/TA): ಸುಪ್ರೀಂ ಕೋರ್ಟ್ ಆದೇಶದ ಬಳಿಕ, ಉತ್ತರ ಪ್ರದೇಶದ ಮಥುರಾದ ಪ್ರಸಿದ್ಧ ಶ್ರೀ ಬಂಕೆ ಬಿಹಾರಿ ದೇವಾಲಯದ ನೆಲಮಾಳಿಗೆಯಲ್ಲದ್ದ ಖಜಾನೆಯನ್ನು ಧಂತೇರಸ್ ದಿನದಂದು 54 ವರ್ಷಗಳ ನಂತರ ಮೊದಲ ಬಾರಿಗೆ ತೆರೆಯಲಾಗಿದೆ. 11 ಸದಸ್ಯರ ಸಮಿತಿಯ ಸಮ್ಮುಖದಲ್ಲಿ ಈ ಮಹತ್ವದ ಕಾರ್ಯಾಚರಣೆ ಆರಂಭವಾಗಿದ್ದು, ದೇವಾಲಯದ ಆಂತರಿಕ ಭದ್ರತೆಯ ಜೊತೆ ಖಜಾನೆಯಲ್ಲಿನ ವಸ್ತುಗಳ ವಿವರ ದಾಖಲಿಸಲಾಗುತ್ತಿದೆ.

ಈ ದೇವಾಲಯದ ನೆಲಮಾಳಿಗೆಯನ್ನು ಕೊನೆಯದಾಗಿ 1971ರಲ್ಲಿ ತೆರೆಯಲಾಗಿತ್ತು. ಬಳಿಕ ಭದ್ರತಾ ಕಾರಣಗಳಿಂದ ದೇವಾಲಯದ ಆ ಭಾಗವನ್ನು ಮುಚ್ಚಲಾಗಿತ್ತು. ಮೂರ್ನಾಲ್ಕು ದಶಕಗಳ ಕಾಲ ದೇಗುಲ ಈ ಭಾಗದ ರಹಸ್ಯವನ್ನು ಉಳಿಸಿಕೊಂಡಿತ್ತು. 1990ರಲ್ಲಿಯೂ ಈ ಖಜಾನೆಯನ್ನು ತೆರೆಯಲು ಪ್ರಯತ್ನಿಸಲಾಯಿತು, ಆದರೆ ಆ ಪ್ರಯತ್ನ ವಿಫಲವಾಗಿತ್ತು.
ಈಗ ದೇವಾಲಯದ ನೆಲಮಾಳಿಗೆ ಮತ್ತೆ ತೆರೆಯಲ್ಪಡುವುದರಿಂದ, ಅದರೊಳಗೆ ಇರುವ ದತ್ತಾಂಶ, ವಜ್ರ, ಚಿನ್ನ, ಬೆಳ್ಳಿ ಮತ್ತು ಹಳೆಯ ಆಭರಣಗಳ ಕುರಿತಾಗಿ ಭಕ್ತರಲ್ಲಿ ಭಾರೀ ಕುತೂಹಲ ಮೂಡಿದೆ. ಕೆಲವು ವರದಿಗಳ ಪ್ರಕಾರ, ಈ ಭಾಗದಲ್ಲಿ 160 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ವಸ್ತುಗಳು ಇಡಲಾಗಿದೆ ಎಂಬ ನಂಬಿಕೆ ಇದೆ.
ಈ ಖಜಾನೆಯನ್ನು ತೆರೆದು ಸರಿಯಾಗಿ ದಾಖಲಿಸಬೇಕು ಎಂಬುದಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ನಿರ್ದೇಶನ ನೀಡಿದ್ದು, ಅದರಿಂದಲೇ ಈ ಮಹತ್ವದ ಕಾರ್ಯಾರಂಭವಾಗಿದೆ. ಭಕ್ತರಲ್ಲಿ ಭಕ್ತಿ ಮಾತ್ರವಲ್ಲ, ಇತಿಹಾಸಪೂರ್ವ ಮತ್ತು ಧಾರ್ಮಿಕ ಮಹತ್ವದ ವಿಚಾರಗಳತ್ತ ಕೂಡ ಆಸಕ್ತಿ ಬೆಳೆಯುತ್ತಿದ್ದು, ಎಷ್ಟು ಧನಸಂಪತ್ತು ಪತ್ತೆಯಾಗುತ್ತದೆ ಎಂಬುದನ್ನು ಉತ್ಸುಕತೆಯಿಂದ ಕಾಯುತ್ತಿದ್ದಾರೆ.