ಪಟ್ನಾ, ಅ. 18 (DaijiworldNews/AA): ಹೊಸ ಮುಖವಾಡ ಧರಿಸಿರುವ ಆರ್ಜೆಡಿ ಪಕ್ಷದ ಮೇಲೆ ನಂಬಿಕೆ ಇಡಬೇಡಿ. ಬಿಹಾರದಲ್ಲಿ ಮತ್ತೊಮ್ಮೆ ಎನ್ಡಿಎ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಅಂಗವಾಗಿ ಅಮಿತ್ ಶಾ ಅವರು ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ನಿತೀಶ್ ಕುಮಾರ್ ಅವರೊಂದಿಗೆ ಸುದೀರ್ಘ ಚುನಾವಣಾ ತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದರು. "ಸಮಾವೇಶವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಅಭಿವೃದ್ಧಿ ವಂಚಿತ, ಕಾನೂನು ಸುವ್ಯವಸ್ಥೆ ಹದಗಟ್ಟಿದ್ದ ಜಂಗಲ್ ರಾಜ್ (ಕಾಡು) ಆಡಳಿತವಿದ್ದ ಈ ಹಿಂದಿನ ಆರ್ಜೆಡಿ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಮರಳಿಸದಂತೆ ಎಚ್ಚರವಹಿಸಿ. ಹೊಸ ಮುಖವಾಡ ಧರಿಸಿರುವ ಜಂಗಲ್ ರಾಜ್ ಆಡಳಿತ ಮನಸ್ಥಿತಿ ಇರುವ ಆರ್ಜೆಡಿ ಪಕ್ಷವನ್ನೂ ನಂಬಬೇಡಿ" ಎಂದು ಹೇಳಿದ್ದಾರೆ.
"ಇದೀಗ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಪ್ರಧಾನಿ ಮೋದಿ ಹಾಗೂ ನಿತೀಶ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ. ಬಿಹಾರವನ್ನು ಭವ್ಯ ರಾಜ್ಯವನ್ನಾಗಿ ಮಾಡಲು ಕೇಂದ್ರ ಹಾಗೂ ರಾಜ್ಯ ಒಟ್ಟಿಗೆ ಶ್ರಮಿಸುತ್ತದೆ. ಆಡಳಿತಾರೂಢ ಎನ್ಡಿಎ ಸರ್ಕಾರ ಚುನಾವಣೆಗೆ ಮುಂಚಿತವಾಗಿ ಸಾಕಷ್ಟು ಉಚಿತ ಯೋಜನೆಗಳನ್ನು ಘೋಷಿಸಲಾಗಿದೆ" ಎಂದರು.
"ಪ್ರತಿ ತಿಂಗಳು 8.52 ಕೋಟಿ ಜನರಿಗೆ ಐದು ಕೆ.ಜಿ ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. 87 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯನ್ನು ನೀಡಲಾಗಿದ್ದು, 52 ಲಕ್ಷ ಜನರು ಬೆಳೆ ವಿಮಾ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ 3.53 ಲಕ್ಷ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ಗಳು 1.57 ಕೋಟಿ ಮಹಿಳೆಯರನ್ನು ತಲುಪಿವೆ ಮತ್ತು 44 ಲಕ್ಷ ನಿರಾಶ್ರಿತರಿಗೆ ಹೊಸ ಮನೆಗಳನ್ನು ಒದಗಿಸಲಾಗಿದೆ" ಎಂದು ವಾಗ್ದಾಳಿ ನಡೆಸಿದರು.