ಮಂತ್ರಾಲಯ, ಅ. 22 (DaijiworldNews/ TA): ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಉಷಾ ಅವರೊಂದಿಗಿದ್ದರು. ವರ್ಷಕ್ಕೊಮ್ಮೆ ನಡೆಯುವ ಮೂಲ ರಾಮದೇವರ ಮಹಾ ಅಭಿಷೇಕದ ಸಂದರ್ಭದಲ್ಲಿ ದಂಪತಿ ರಾಯರ ದರ್ಶನ ಪಡೆದಿದ್ದಾರೆ.

ಡಿಕೆಶಿ ಅವರು ಶ್ರೀಮಠದಲ್ಲಿ ನಾಡಿನ ಸಮಸ್ತ ಜನರ ಸುಖ, ಶಾಂತಿ ಮತ್ತು ಒಳ್ಳೆಯದಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾಗಿ ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಂಚಾಲಮ್ಮ ದೇವಿಯ ದರ್ಶನವನ್ನು ಪಡೆದ ಅವರು, ನಂತರ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, "ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ವೇಳೆ ನಾನು ಶ್ರೀಮಠಕ್ಕೆ ಆಗಮಿಸಿದ್ದೆ. ಆಗ ಮಾಡಿದ್ದ ಸಂಕಲ್ಪದ ಫಲವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ" ಎಂದು ಹೇಳಿದ್ದಾರೆ.
"ಮಂತ್ರಾಲಯಕ್ಕೆ ಬರುವ ಇಚ್ಛೆ ಬಹಳ ದಿನಗಳ ಹಿಂದಿನಿಂದ ಇದ್ದದು. ಶ್ರೀಮಠದಿಂದ ಆಹ್ವಾನವೂ ಬಂದಿತ್ತು. ಇಂದು ವಿಶೇಷ ದಿನ , ಶ್ರೀಮಠದ ಭೂಮಿ ಪೂಜಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೇನೆ" ಎಂದು ಅವರು ತಮ್ಮ ಭಾವನೆ ಹಂಚಿಕೊಂಡರು.