ನವದೆಹಲಿ, ಅ. 23 (DaijiworldNews/ TA): ರೋಹಿಣಿ ಪ್ರದೇಶದಲ್ಲಿ ಬೆಳಗಿನ ಜಾವ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಪ್ರಸಿದ್ಧ ಸಿಗ್ಮಾ ಗ್ಯಾಂಗ್ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ಗಳು ಹತ್ಯೆಯಾಗಿದ್ದಾರೆ. ಬೆಳಗಿನ ಸುಮಾರು 2.20 ಗಂಟೆಗೆ ವಾಯುವ್ಯ ದೆಹಲಿಯಲ್ಲಿರುವ ಪ್ರದೇಶದಲ್ಲಿ ದೆಹಲಿ ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ವೇಳೆ ಈ ಘಟನೆ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಗ್ಯಾಂಗ್ ಸದಸ್ಯರನ್ನು ಬಂಧಿಸಲು ಪ್ರಯತ್ನಿಸಿದಾಗ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ದಾಳಿ ನಡೆಸಿದ್ದು, ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳಿಗೆ ಗುಂಡೇಟು ತಗುಲಿ ಗಾಯಗಳಾಗಿವೆ. ಅವರನ್ನು ತಕ್ಷಣವೇ ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರೂ ಮೃತಪಟ್ಟಿದ್ದಾರೆ.
ಹತ್ಯೆಯಾದ ಗ್ಯಾಂಗ್ಸ್ಟರ್ಗಳನ್ನು ರಂಜನ್ ಪಾಠಕ್ (25 ವರ್ಷ), ಬಿಮ್ಲೇಶ್ ಮಹ್ತೊ (25 ವರ್ಷ), ಮನೀಶ್ ಪಾಠಕ್ (33 ವರ್ಷ) ಮತ್ತು ಅಮನ್ ಠಾಕೂರ್ (21 ವರ್ಷ) ಎಂದು ಗುರುತಿಸಲಾಗಿದೆ. ಇವರಲ್ಲಿ ರಂಜನ್ ಪಾಠಕ್ ಈ ಗ್ಯಾಂಗ್ನ ನಾಯಕನಾಗಿದ್ದಾನೆ. ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ, ಗುತ್ತಿಗೆ ಹತ್ಯೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ನಾಲ್ವರು ಆರೋಪಿಗಳು ಬಿಹಾರದಲ್ಲಿ ನಡೆದ ಹಲವು ಕೊಲೆ, ಸುಲಿಗೆ ಮತ್ತು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಪಾಠಕ್ ವಿರುದ್ಧ ರೂ.25,000 ರೂ. ಬಹುಮಾನ ಘೋಷಿಸಲಾಗಿತ್ತು. ಅವನು ಸೀತಾಮರ್ಹಿ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ನಡೆದ ಐದು ಪ್ರಮುಖ ಕೊಲೆ ಪ್ರಕರಣಗಳು ಸೇರಿದಂತೆ ಎಂಟು ಕ್ರಿಮಿನಲ್ ಕೇಸ್ಗಳಲ್ಲಿ ಆರೋಪಿಯಾಗಿದ್ದ. ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಸವಾಲು ಹಾಕುತ್ತಿದ್ದ ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಪತ್ತೆಯಾದ ಆಡಿಯೊ ಕ್ಲಿಪ್ನಲ್ಲಿ, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಸಿಗ್ಮಾ ಗ್ಯಾಂಗ್ ರೂಪಿಸುತ್ತಿದ್ದ ಪ್ರಮುಖ ಪಿತೂರಿಯ ವಿವರಗಳು ಬಹಿರಂಗವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎನ್ಕೌಂಟರ್ ನಂತರ, ಸಂಪೂರ್ಣ ಪ್ರದೇಶವನ್ನು ಸುತ್ತುವರಿಸಿ, ವಿಧಿವಿಜ್ಞಾನ ತಂಡಗಳು ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿವೆ.
ಪೊಲೀಸರು ಇದೀಗ ಸಿಗ್ಮಾ ಗ್ಯಾಂಗ್ನ ಉಳಿದ ಸದಸ್ಯರು ಹಾಗೂ ಅವರ ಸಂಪರ್ಕ ಜಾಲವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ದೆಹಲಿ - ಬಿಹಾರ ಗಡಿ ಪ್ರದೇಶದ ಅಪರಾಧ ಚಟುವಟಿಕೆಗಳ ಮೇಲೆ ದೊಡ್ಡ ಹೊಡೆತ ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.