ಬೆಂಗಳೂರು, ಅ. 23 (DaijiworldNews/ AK): ರಾಜ್ಯಕ್ಕೆ ಹಿಡಿದಿರುವ ದೊಡ್ಡ ಗ್ರಹಣವೆಂದರೆ ಕಾಂಗ್ರೆಸ್ ಆಡಳಿತ. ಇನ್ನು ಉಳಿದ ಎರಡೂವರೆ ವರ್ಷದ ನಂತರ ರಾಜ್ಯಕ್ಕೆ ಗ್ರಹಣ ಮುಕ್ತಿಯಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ವಿಶ್ಲೇಷಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷಗಳ ನಂತರ ಕರ್ನಾಟಕ ಸೂರ್ಯ ಚಂದ್ರ ಇರುವವರೆಗೂ ಪ್ರಕಾಶಮಾನವಾಗಿ ಬೆಳಗುತ್ತದೆ ಎಂದು ನುಡಿದರು.
ಸಿದ್ದರಾಮಯ್ಯ ಅವರೇ, ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ನಿಮ್ಮ ಆಡಳಿತ. ನೀವು ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷವಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳಿಂದ ಜನರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ನಿಮ್ಮ ಆಡಳಿತ ಎಷ್ಟು ಚೆನ್ನಾಗಿದೆ ಎಂಬುದಕ್ಕೆ ಬೆಂಗಳೂರಿನ ರಸ್ತೆ ಗುಂಡಿಗಳೇ ಸಾಕ್ಷಿ ಎಂದು ವ್ಯಂಗ್ಯವಾಡಿದರು.
ಅಮಾವಾಸ್ಯೆ- ಹುಣ್ಣಿಮೆಗೆ ವ್ಯತ್ಯಾಸ ತಿಳಿದಿಲ್ಲ.
ಸಿದ್ದರಾಮಯ್ಯ ಅವರು ಹಿರಿಯರು ಹಾಗೂ ಲೋಕಾನುಭವ ಹೊಂದಿರುವವರು. ಅಮಾವಾಸ್ಯೆಗೂ ಮತ್ತು ಹುಣ್ಣಿಮೆಗೂ ಅವರಿಗೆ ವ್ಯತ್ಯಾಸ ಗೊತ್ತಿಲ್ಲ. ಅಮಾವಾಸ್ಯೆ ದಿನವು ಸೂರ್ಯ ಇರುತ್ತಾನೆ; ಹುಣ್ಣಿಮೆ ದಿನವೂ ಸೂರ್ಯ ಇರುತ್ತಾನೆ. ವರ್ಷದ 365 ದಿನವೂ ಪ್ರಕಾಶಮಾನವಾಗಿರುವುದು ಸೂರ್ಯನೇ ಎಂದು ತೇಜಸ್ವಿ ಸೂರ್ಯ ಅವರು ಹೇಳಿದರು.
ಅಮಾವಾಸ್ಯೆ ದಿನ ಇಲ್ಲದಿರುವವನು ಚಂದ್ರ; ಸಿದ್ದರಾಮಯ್ಯ ಅವರೇ ಸೂರ್ಯನಲ್ಲ
ಚಂದ್ರನನ್ನು ನೋಡಿ ಪೂಜೆ ಮಾಡುವ ಜನರೊಂದಿಗೆ ಅವರು ಇದ್ದು ಇದ್ದು, ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಸೂರ್ಯ ಇರುವುದಿಲ್ಲ ಎಂಬ ಗೊಂದಲದಲ್ಲಿ ಅವರು ಇದ್ದಾರೆ ಎಂದು ಟೀಕಿಸಿದರು. ಚಂದ್ರ ಯಾವತ್ತು ಇರುತ್ತಾನೆ; ಯಾವತ್ತು ಇರುವುದಿಲ್ಲ, ಪೂರ್ತಿ ಚಂದ್ರನಿದ್ದಾನೇಯೇ ಅಥವಾ ಅರ್ಧ ಚಂದ್ರನಿದ್ದಾನೆಯೇ; ನಮ್ಮ ಊರಿನಲ್ಲಿ ಚಂದ್ರ ಕಾಣಿಸಿದ್ದಾನೋ; ಬೇರೆ ಊರಿನಲ್ಲಿ ಕಾಣಿಸಿದ್ದಕ್ಕೆ ಇಲ್ಲಿ ಪೂಜೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದೆಲ್ಲವನ್ನು ಮಾಡುವುದು ನಾವಲ್ಲ. ನಮಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನವೂ ಲಕ್ಷ್ಮೀ ಪೂಜೆಯನ್ನು ಮಾಡುತ್ತೇವೆ ಎಂದು ವಿವರಿಸಿದರು.
ಸೂರ್ಯ ಮತ್ತು ಚಂದ್ರರನ್ನು ಪೂಜಿಸುವ ವ್ಯತ್ಯಾಸ ಹಾಗೂ ಅಮವಾಸ್ಯೆ ಹಾಗೂ ಹುಣ್ಣಿಮೆಗೂ ವ್ಯತ್ಯಾಸ ತಿಳಿದುಕೊಂಡು ಮುಂದೆ ಈ ರೀತಿ ಹೇಳಿಕೆಗಳನ್ನು ಕೊಡಿ ಎಂದು ತಿಳಿಸಿದರು. ಸೂರ್ಯ ಹುಣ್ಣಿಮೆ ದಿನ ಎಷ್ಟು ಪ್ರಕಾಶಮಾನವಾಗಿ ಇರುತ್ತಾನೆ, ಅಷ್ಟೇ ಪ್ರಕಾಶಮಾನವಾಗಿ ಅಮಾವಾಸ್ಯೆ ದಿನವೂ ಇರುತ್ತಾನೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಇಂಥ ಟೀಕೆ ನನ್ನ ಪಕ್ಷದ ಸಂಸ್ಕಾರವಲ್ಲ..
ಸಿದ್ದರಾಮಯ್ಯ ಅವರ ಬಗ್ಗೆ ನಾನೂ ಟೀಕಿಸಬಹುದು. ಆದರೆ ನನ್ನನ್ನು 24 ಲಕ್ಷ ಜನ ಸಂಸದನಾಗಿ ಆಯ್ಕೆ ಮಾಡಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವಾಗ ಆ ರೀತಿಯ ಮಾತು ನನಗೆ ಶೋಭೆ ತರುವುದಿಲ್ಲ ಹಾಗೂ ನನ್ನ ಮತ್ತು ಪಕ್ಷದ ಸಂಸ್ಕಾರ ಅಲ್ಲ ಎಂದು ತಿಳಿಸಿದರು.