ಹೈದರಾಬಾದ್, ಅ. 24 (DaijiworldNews/ TA): ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ ವೋಲ್ವೊ ಬಸ್ ಭೀಕರ ದುರಂತಕ್ಕೆ ಒಳಗಾಗಿದೆ. ಹೈದರಾಬಾದ್ - ಬೆಂಗಳೂರು ಹೆದ್ದಾರಿಯ ಚಿನ್ನ ಟೆಕುರು ಗ್ರಾಮದ ಬಳಿ ಈ ಬಸ್ ಬೆಂಕಿಗಾಹುತಿಯಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ದೃಢವಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಮೊದಲು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಬಸ್ನ ಕೆಳಗೆ ಸಿಲುಕಿಕೊಂಡಿತ್ತು. ಬೈಕ್ ನೆಲಕ್ಕೆ ಉಜ್ಜಿದ ಪರಿಣಾಮ ಅದು ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಯಿತು. ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರನ್ನು ಕೆಳಗೆ ಇಳಿಸಲು ಪ್ರಯತ್ನಿಸಿದರೂ, ಬೆಂಕಿ ತೀವ್ರವಾಗಿ ಹಬ್ಬಿದ ಕಾರಣ ಅನೇಕರು ಒಳಗೇ ಸಿಲುಕಿಕೊಂಡರು. ವೋಲ್ವೊ ಬಸ್ನ ಕಿಟಕಿಗಳು ಮುಚ್ಚಿದ್ದರಿಂದ ಹೊರಬರುವುದು ಕಷ್ಟವಾಯಿತು.
ಕೆಲವರನ್ನು ಕಿಟಕಿ ಒಡೆದು ರಕ್ಷಿಸಲಾಯಿತು, ಆದರೆ ಅನೇಕರು ಉಸಿರುಗಟ್ಟಿ, ಸುಟ್ಟು ಸಾವನ್ನಪ್ಪಿದರು. ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಘಟನೆಯನ್ನು ಅತ್ಯಂತ ದುರಂತವೆಂದು ಹೇಳಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು ಹಾಗೂ ಗಾಯಗೊಂಡವರಿಗೆ ತ್ವರಿತ ವೈದ್ಯಕೀಯ ನೆರವು ಹಾಗೂ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಹೈದರಾಬಾದ್ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ರೂ. 2 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ರೂ. 50 ಸಾವಿರ ನೆರವು ಘೋಷಿಸಿದ್ದಾರೆ. ಕರ್ನಾಟಕದ ಗೃಹಸಚಿವ ರಾಮಲಿಂಗಾ ರೆಡ್ಡಿ ಅವರು ಘಟನೆಯ ಕುರಿತು ಪ್ರತಿಕ್ರಿಯಿಸಿ, ಬಾಗೇಪಲ್ಲಿಯ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದರು ಮತ್ತು ಅಪಘಾತದಲ್ಲಿ ಕರ್ನಾಟಕದವರು ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದರು.