ನವದೆಹಲಿ, ಅ. 24 (DaijiworldNews/ TA): ಭಾರತೀಯ ಜಾಹೀರಾತು ಲೋಕದ ಲೆಜೆಂಡ್ ಪಿಯೂಷ್ ಪಾಂಡೆ ಶುಕ್ರವಾರ ನಿಧನರಾದರು. ಫೆವಿಕಾಲ್, ಕ್ಯಾಡ್ಬರಿ ಮತ್ತು ಏಷ್ಯನ್ ಪೇಂಟ್ಸ್ನಂತಹ ಅಜರಾಮರ ಜಾಹೀರಾತುಗಳ ಹಿಂದಿನ ಪ್ರತಿಭಾವಂತ ವ್ಯಕ್ತಿ, ಪಾಂಡೆ (70) ಅವರು ಒಂದು ಸೋಂಕಿನಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.

ಭಾರತೀಯ ಜಾಹೀರಾತಿನ ಧ್ವನಿ ಎಂದೇ ಪ್ರಸಿದ್ಧರಾಗಿದ್ದ ಪಾಂಡೆ, ಸುಮಾರು ನಾಲ್ಕು ದಶಕಗಳ ಕಾಲ ಜಾಹೀರಾತು ಉದ್ಯಮದಲ್ಲಿ ಕ್ರಿಯಾಶೀಲರಾಗಿದ್ದರು. ಅವರು ಓಗಿಲ್ವಿ ಸಂಸ್ಥೆಯ ವಿಶ್ವಾದ್ಯಂತದ ಮುಖ್ಯ ಸೃಜನಾತ್ಮಕ ಅಧಿಕಾರಿ ಹಾಗೂ ಭಾರತದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು.
1982ರಲ್ಲಿ ಓಗಿಲ್ವಿಗೆ ಸೇರಿ, ತಮ್ಮ ಮೊದಲ ಜಾಹೀರಾತು ಸನ್ಲೈಟ್ ಡಿಟರ್ಜೆಂಟ್ಗಾಗಿ ಮೊದಲ ಸ್ಕ್ರಿಪ್ಟ್ ಬರೆದ ಪಾಂಡೆ, ಆರು ವರ್ಷಗಳ ನಂತರ ಸಂಸ್ಥೆಯ ಕ್ರಿಯೇಟಿವ್ ವಿಭಾಗವನ್ನು ಮುನ್ನಡೆಸಿದರು. ಅವರ ಮಾರ್ಗದರ್ಶನದಲ್ಲಿ ಫೆವಿಕಾಲ್, ಕ್ಯಾಡ್ಬರಿ, ಏಷ್ಯನ್ ಪೇಂಟ್ಸ್, ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಸೇರಿದಂತೆ ಅನೇಕ ಬ್ರಾಂಡ್ಗಳಿಗಾಗಿ ಕಾಲಾತೀತ ಜಾಹೀರಾತುಗಳು ಮೂಡಿಬಂದವು.
ಪಾಂಡೆ ಅವರ ನಾಯಕತ್ವದಲ್ಲಿ, ಓಗಿಲ್ವಿ ಇಂಡಿಯಾ ದಿ ಎಕನಾಮಿಕ್ ಟೈಮ್ಸ್ ನಡೆಸಿದ ಸ್ವತಂತ್ರ ಸಮೀಕ್ಷೆಯಾದ ಏಜೆನ್ಸಿ ರೆಕನರ್ನಲ್ಲಿ ನಿರಂತರ 12 ವರ್ಷಗಳ ಕಾಲ ನಂಬರ್ 1 ಜಾಹೀರಾತು ಸಂಸ್ಥೆಯಾಗಿ ಆಯ್ಕೆಯಾಯಿತು. ಅವರ ಕೊಡುಗೆಗಾಗಿ ಪಾಂಡೆ ಅವರಿಗೆ 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
ನಟನೆಯತ್ತ ಪಾದಾರ್ಪಣೆ:
ಜಾಹೀರಾತು ಕ್ಷೇತ್ರದಲ್ಲಿ ಕ್ರಿಯೇಟಿವಿಟಿಯ ಪ್ರತೀಕವಾಗಿದ್ದ ಪಿಯೂಷ್ ಪಾಂಡೆ, 2013ರಲ್ಲಿ ಜಾನ್ ಅಬ್ರಹಾಂ ಅಭಿನಯದ ಮದ್ರಾಸ್ ಕಫೆ ಚಿತ್ರದಲ್ಲಿ ಹಾಗೂ ಐಸಿಐಸಿಐ ಬ್ಯಾಂಕ್ನ ಮ್ಯಾಜಿಕ್ ಪೆನ್ಸಿಲ್ ಪ್ರಾಜೆಕ್ಟ್ ವಿಡಿಯೋಗಳಲ್ಲಿ ಅಭಿನಯಿಸಿದ್ದರು. ಅವರು ರಾಷ್ಟ್ರಪ್ರೇಮದ ನಾದವಾಗಿರುವ “ಮಿಲೇ ಸುರ್ ಮೇರಾ ತುಮ್ಹಾರಾ” ಹಾಡಿನ ಗೀತರಚನೆಕಾರರಾಗಿದ್ದರು ಮತ್ತು ಭೋಪಾಲ್ ಎಕ್ಸ್ಪ್ರೆಸ್ ಚಿತ್ರಕ್ಕೂ ಸಹ-ಕಥೆ ಬರೆದಿದ್ದರು.
ಪಿಯೂಷ್ ಪಾಂಡೆ ಅವರ ನಿಧನಕ್ಕೆ ವ್ಯಾಪಾರ, ಜಾಹೀರಾತು ಮತ್ತು ರಾಜಕೀಯ ವಲಯದ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಮಾಧ್ಯಮದಲ್ಲಿ , “ಅವರು ಮಣ್ಣಿನ ಭಾಷೆ, ಹಾಸ್ಯ ಮತ್ತು ನಿಜವಾದ ಸಂವಹನವನ್ನು ಪರಿವರ್ತಿಸಿದರು. ಅವರ ಪರಂಪರೆ ಪೀಳಿಗೆಗಳವರೆಗೆ ಸ್ಫೂರ್ತಿ ನೀಡುತ್ತದೆ,” ಎಂದು ಹೇಳಿದ್ದಾರೆ.