ನವದೆಹಲಿ, ಅ. 24 (DaijiworldNews/ TA): ಛತ್ ಪೂಜೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ವಿಶೇಷ ಮನವಿ ಮಾಡಿದ್ದಾರೆ. ಪ್ರಕೃತಿ ಮತ್ತು ಸಂಸ್ಕೃತಿಗೆ ಮೀಸಲಾಗಿರುವ ಭವ್ಯ ಹಬ್ಬವಾದ ಛತ್ ಸಮೀಪಿಸುತ್ತಿದೆ. ಬಿಹಾರ ಹಾಗೂ ದೇಶಾದ್ಯಂತ ಭಕ್ತರು ಈಗಾಗಲೇ ಭಕ್ತಿಯಿಂದ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಛತ್ ಪೂಜೆಗೆ ಸಮರ್ಪಿತವಾದ ಹಾಡುಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ, ಮುಂದಿನ ದಿನಗಳಲ್ಲಿ ನಾನು ಅವುಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಮೋದಿ ವಿನಂತಿಸಿದ್ದಾರೆ.

ಛತ್ ಪೂಜೆ ಹಿಂದೂ ಹಬ್ಬವಾಗಿದ್ದು, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಸೂರ್ಯ ದೇವರಿಗೆ ಹಾಗೂ ಛಾತ್ ಮಯ್ಯಾ(ಉಷಾ ದೇವಿ)ಗೆ ಅರ್ಪಿಸಲಾಗುತ್ತದೆ. ಈ ಬಾರಿ ಹಬ್ಬ ಅ.25ರಿಂದ 28ರವರೆಗೆ ನಡೆಯಲಿದೆ.
ಜನರು ದೀರ್ಘಾಯುಷ್ಯ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಉಪವಾಸ, ಪವಿತ್ರ ಸ್ನಾನ ಮಾಡಿ, ಸೂರ್ಯಾಸ್ತ ಮತ್ತು ಉದಯಿಸುತ್ತಿರುವ ಸೂರ್ಯನಿಗೆ ನಮಸ್ಕರಿಸುವ ಮೂಲಕ ಆಚರಿಸುತ್ತಾರೆ. ಛತ್ ಎಂದರೆ ಆರು, ಈ ಹಬ್ಬವನ್ನು ಕಾರ್ತಿಕ ಮಾಸದ ಆರನೇ ದಿನದಂದು ಆಚರಿಸಲಾಗುತ್ತದೆ ಎಂದು ಸೂಚಿಸುತ್ತದೆ. ಈ ದಿನ, ಭಕ್ತರು ಬೆಳಕಿನ ದೇವರಿಗೆ ಅಂದರೆ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಬ್ರಹ್ಮಾಂಡದ ಎಲ್ಲಾ ಜೀವಿಗಳಿಗೆ ಶಕ್ತಿಯನ್ನು ನೀಡುವ ಜೀವ ಶಕ್ತಿ ಸೂರ್ಯ. ಈ ಹಿನ್ನಲೆ ಆತನ ಆರಾಧಿಸಲಾಗುತ್ತದೆ. ನಹಯ್-ಖಯ್, ಖರ್ನಾ, ಅಸ್ತಮಿಸುವ ಸೂರ್ಯನಿಗೆ ಅರ್ಘ್ಯ, ಉದಯಿಸುವ ಸೂರ್ಯನಿಗೆ ಆರ್ಘ್ಯ ಹೀಗೆ ದಿನಕ್ಕೆ ಒಂದರಂತೆ ಹಬ್ಬ ಆಚರಿಸಲಾಗುತ್ತದೆ. ಉಪವಾಸವು ಹಬ್ಬದ ಪ್ರಮುಖ ಭಾಗವಾಗಿದೆ.
ಪ್ರಾಚೀನ ವೇದಗಳ ಕಾಲದಿಂದಲೂ ಛತ್ ಪೂಜೆಯನ್ನು ನಡೆಸಲಾಗುತ್ತಿತ್ತು. ಈ ಯುಗದಲ್ಲಿ ಋಷಿಗಳು ಉಪವಾಸವನ್ನು ಮಾಡಿದ ನಂತರ ಸೂರ್ಯನ ಕಿರಣಗಳಿಂದ ಶಕ್ತಿ ಮತ್ತು ಜೀವಶಕ್ತಿಯನ್ನು ಪಡೆಯಲು ಸೂರ್ಯನ ಬೆಳಕಿಗೆ ತಮ್ಮನ್ನು ಒಡ್ಡಿಕೊಳ್ಳುವ ಮೂಲಕ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು.
ಈ ಛತ್ ಪೂಜೆಯನ್ನು ಮೊದಲು ಸೂರ್ಯ ಮತ್ತು ಕುಂತಿಯ ಪುತ್ರ ಕರ್ಣನು ನಡೆಸಿದ್ದ ಎಂದು ಹೇಳಲಾಗುತ್ತದೆ. ಕರ್ಣನು ಅಂಗದೇಶದ ಅಧಿಪತಿಯಾಗಿದ್ದನು, ಇದು ಇಂದಿನ ಬಿಹಾರದ ಭಾಗಲ್ಪುರವಾಗಿದ್ದು, ಈ ರಾಜ್ಯದ ಜನರು ಇಂದಿಗೂ ಈ ಪೂಜೆ ಅನುಸರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.