ನವದೆಹಲಿ, ನ. 02 (DaijiworldNews/TA): ರಾಜಧಾನಿ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸುವ ಕಾರ್ಯವನ್ನು ಆರಂಭಿಸಿದೆ. ಈ ನೀತಿಯಲ್ಲಿ ಮದ್ಯ ಮಾರಾಟದ ನಿಯಮಗಳಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಗ್ರಾಹಕರಿಗೆ ಉತ್ತಮ ಖರೀದಿಯ ಅನುಭವ ನೀಡುವ ಉದ್ದೇಶದಿಂದ ಮದ್ಯವನ್ನು ವ್ಯಾಪಾರ ಮಳಿಗೆಗಳು, ಮಾಲ್ಗಳು ಅಥವಾ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಪ್ರಸ್ತುತ ದೆಹಲಿಯಲ್ಲಿ 700 ಸರ್ಕಾರಿ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. DSIIDC, DTTDC, DSCSC ಮತ್ತು ದಿಲ್ಲಿ ಕಂಸ್ಯೂಮರ್ ಕೋ-ಆಪರೇಟಿವ್ ಹೋಲ್ಸೇಲ್ ಸ್ಟೋರ್ ಎಂಬ ನಾಲ್ಕು ಸರ್ಕಾರಿ ಸಂಸ್ಥೆಗಳು ಮದ್ಯ ಮಾರಾಟದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿವೆ. ಸರ್ಕಾರ ಈಗಿರುವ ಅಂಗಡಿಗಳನ್ನು ಹೆಚ್ಚು ಆಧುನಿಕ ಮತ್ತು ಗ್ರಾಹಕ ಸ್ನೇಹಿಯನ್ನಾಗಿ ಪರಿವರ್ತಿಸುವ ಯೋಜನೆ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಅಬಕಾರಿ ನೀತಿಯಲ್ಲಿ ಮದ್ಯದಂಗಡಿಗಳನ್ನು ಶಾಲೆಗಳು, ಧಾರ್ಮಿಕ ಸ್ಥಳಗಳು ಹಾಗೂ ವಸತಿ ಪ್ರದೇಶಗಳಿಂದ ದೂರ ಇಡುವ ಪ್ರಸ್ತಾಪವಿದೆ. ವಾಣಿಜ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವೆ ಸಮತೋಲನ ಕಾಯ್ದುಕೊಂಡು ಮದ್ಯ ಮಾರಾಟ ವ್ಯವಸ್ಥೆಯನ್ನು ಸುಧಾರಿಸುವ ಗುರಿ ಸರ್ಕಾರದದ್ದಾಗಿದೆ. ಈ ನೀತಿಯ ಕರಡು ರಚನೆಗೆ ಸಿಎಂ ರೇಖಾ ಗುಪ್ತಾ ನೇತೃತ್ವದ ಸಮಿತಿ ನೇಮಕಗೊಂಡಿದ್ದು, ಅದು ಈಗಾಗಲೇ ಕರಡು ವರದಿ ಸಿದ್ಧಪಡಿಸಿದೆ.
ಸಮಿತಿಯು ದೇಶದ ವಿವಿಧ ರಾಜ್ಯಗಳ ಅಬಕಾರಿ ನೀತಿಗಳನ್ನು ಅಧ್ಯಯನ ಮಾಡಿ ಸಾಧಕ-ಬಾಧಕ ಅಂಶಗಳ ಕುರಿತು ಚರ್ಚೆ ನಡೆಸಿದೆ. ವರದಿಗಳ ಪ್ರಕಾರ, ಹೊಸ ನೀತಿಯಲ್ಲಿ ಮದ್ಯ ಮಾರಾಟಗಾರರಿಗೆ ನೀಡಲಾಗುವ ಸ್ಥಿರ ಲಾಭದ ಅಂತರವನ್ನು ತೆಗೆದು ಹಾಕುವ ಪ್ರಸ್ತಾಪವಿದೆ. ಪ್ರಸ್ತುತ ಮದ್ಯ ಮಾರಾಟಗಾರರು ಭಾರತೀಯ ಮದ್ಯ ಬ್ರ್ಯಾಂಡ್ಗಳಿಗೆ ರೂ.50 ಹಾಗೂ ವಿದೇಶಿ ಬ್ರ್ಯಾಂಡ್ಗಳಿಗೆ ರೂ.100 ಲಾಭ ಪಡೆಯುತ್ತಾರೆ. ಇದರ ಪರಿಣಾಮವಾಗಿ ವ್ಯಾಪಾರಿಗಳು ಉನ್ನತ ಮಟ್ಟದ ಪ್ರೀಮಿಯಂ ಬ್ರ್ಯಾಂಡ್ಗಳನ್ನು ಸ್ಟಾಕ್ ಮಾಡಲು ಆಸಕ್ತಿ ತೋರಿಸುತ್ತಿಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೊಸ ನೀತಿಯು ಬ್ರ್ಯಾಂಡ್ ಮತ್ತು ಬೆಲೆಯ ಆಧಾರದ ಮೇಲೆ ಲಾಭದ ಪ್ರಮಾಣವನ್ನು ಬದಲಿಸುವ ವ್ಯವಸ್ಥೆಯನ್ನು ತರಲಿದೆ. ಇದರಿಂದ ಪ್ರೀಮಿಯಂ ಮದ್ಯದ ಲಭ್ಯತೆ ಹೆಚ್ಚಾಗಿ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021-22ರಲ್ಲಿ ಆಮ್ ಆದ್ಮಿ ಸರ್ಕಾರ ಮದ್ಯ ಮಾರಾಟದಲ್ಲಿ ಖಾಸಗೀಕರಣಕ್ಕೆ ಅನುಮತಿ ನೀಡಿದ್ದರೂ, ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಆ ನೀತಿ ನಂತರ ರದ್ದುಗೊಂಡಿತ್ತು. ಬಳಿಕ ಸೆಪ್ಟೆಂಬರ್ 2022ರಲ್ಲಿ ಸರ್ಕಾರಿ ಮದ್ಯದಂಗಡಿಗಳು ಪುನಃ ಆರಂಭಗೊಂಡಿದ್ದು, ಈ ವ್ಯವಸ್ಥೆ ಮಾರ್ಚ್ 31, 2026ರವರೆಗೆ ಮುಂದುವರಿಯಲಿದೆ. ಹೊಸ ನೀತಿಯು ಮದ್ಯ ಮಾರಾಟವನ್ನು ಪಾರದರ್ಶಕ, ಜವಾಬ್ದಾರಿಯುತ ಹಾಗೂ ಗ್ರಾಹಕ ಸ್ನೇಹಿಯನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಸರ್ಕಾರದ ವಲಯಗಳು ಹೇಳಿವೆ.
ಸಿಎಂ ರೇಖಾ ಗುಪ್ತಾ ನೇತೃತ್ವದ ಸಮಿತಿಯ ವರದಿ ಶೀಘ್ರದಲ್ಲೇ ದೆಹಲಿ ಕ್ಯಾಬಿನೆಟ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಆದರೆ ಈ ನಡುವೆ ಮದ್ಯಪ್ರಿಯರ ಕುತೂಹಲ ಹೆಚ್ಚಿಸಿರುವ ಪ್ರಶ್ನೆ ಏನೆಂದರೆ ಹೊಸ ನೀತಿಯಲ್ಲಿ “ಬೈ ಒನ್, ಗೆಟ್ ಒನ್ ಫ್ರೀ” ಆಫರ್ಗಳಿಗೂ ಅವಕಾಶ ಇರಬಹುದೇ? ಎಂಬುದು. ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲದಿದ್ದರೂ, ಹೊಸ ಅಬಕಾರಿ ನೀತಿ ಅನುಷ್ಠಾನಗೊಂಡ ಬಳಿಕ ದೆಹಲಿಯ ಮದ್ಯ ಮಾರಾಟ ವ್ಯವಸ್ಥೆ ಸಂಪೂರ್ಣ ಬದಲಾವಣೆಯ ಹಾದಿ ಹಿಡಿಯುವ ಸಾಧ್ಯತೆ ಇದೆ.