ಚಿಕ್ಕಮಗಳೂರು, ನ. 02 (DaijiworldNews/TA): ಇಂಗ್ಲಿಷ್ ಭಾಷೆ ಕನ್ನಡತನಕ್ಕೆ ಸವಾಲು ಎಸೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಎಲ್ಲ ಕನ್ನಡಿಗರೂ ಒಂದಾಗಿ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಕರೆ ನೀಡಿದರು.

ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಅಗತ್ಯ. ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ಕಲಿಯೋಣ, ವ್ಯವಹಾರಕ್ಕಾಗಿ ಬಳಸೋಣ. ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳಿ, ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸೋಣ,” ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯದ ಸಾಧನೆಗಳನ್ನು ನೆನಪಿಸಿಕೊಂಡ ಸಚಿವರು, “ಹಿಂದಿ ಹೊರತುಪಡಿಸಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ. 2008ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಕನ್ನಡ ನಮ್ಮೆಲ್ಲರ ಹೆಮ್ಮೆ. ಈ ಭಾಷೆಗೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅಮೂಲ್ಯ ಕೊಡುಗೆ ನೀಡಿವೆ. ಕನ್ನಡ ಜನಪದರು ಜಾನಪದ ಗೀತೆಗಳ ಮೂಲಕ ಈ ನೆಲದ ಸೊಗಡನ್ನು ಹೆಚ್ಚಿಸಿದ್ದಾರೆ,” ಎಂದರು.
ಭಾಷೆ ನಿರಂತರವಾಗಿ ಬಳಕೆಯಲ್ಲಿದ್ದಾಗ ಮಾತ್ರ ಅದರ ಸೌಂದರ್ಯ ಮತ್ತು ಅಭಿಮಾನ ಜೀವಂತವಾಗಿರುತ್ತದೆ ಎಂದು ಅವರು ಹೇಳಿದರು. “ಕನ್ನಡವನ್ನು ಸಮೃದ್ಧಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಮ್ಮ ಭಾಷೆ, ನಮ್ಮ ಹೆಮ್ಮೆ ಅದನ್ನು ಉಳಿಸಿ ಬೆಳೆಸೋಣ,” ಎಂದು ಸಚಿವರು ಅಭಿಪ್ರಾಯಪಟ್ಟರು.
ಮುಂದುವರೆದು ಮಾತನಾಡಿದ ಜಾರ್ಜ್ ಅವರು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿದರು. “2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡ್ಡಿ, ಅತಂಕವಿಲ್ಲದೆ ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ವಿರೋಧ ಪಕ್ಷದ ವಿರೋಧದ ನಡುವೆಯೂ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದು ನಮ್ಮ ಬದ್ಧತೆಯ ಸಾಕ್ಷಿ,” ಎಂದು ಹೇಳಿದರು.
ಸಚಿವರು ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುತ್ತಾ, “ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ತಲಾ ರೂ. 50 ಕೋಟಿಯಂತೆ ಒಟ್ಟು ರೂ. 250 ಕೋಟಿ ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಯಡಿ 89 ಕಾಮಗಾರಿಗಳಿಗೆ ರೂ. 150 ಕೋಟಿ ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ಹೊಸ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಡೂರಿನಲ್ಲಿ ರೂ. 16 ಕೋಟಿ ವೆಚ್ಚದಲ್ಲಿ ಪ್ರಜಾ ಸೌಧ ಕಟ್ಟಡಕ್ಕೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ರೂ. 7 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ,” ಎಂದು ವಿವರಿಸಿದರು.
ಸಚಿವರು “ಪೋಷಣ್ ಅಭಿಯಾನ ಯೋಜನೆ” ಅಡಿಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಪೌಷ್ಠಿಕತೆ ಉತ್ತೇಜಿಸಲು ರೂ. 1,03,288ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು. “ಕಂದಾಯ ಇಲಾಖೆಯ ಪೌತಿ ಖಾತೆ ಅಂದೋಲನದಡಿ, ಮೃತರ ಹೆಸರಿನಲ್ಲಿದ್ದ 22,000 ಕಂದಾಯ ಖಾತೆಗಳನ್ನು ಕುಟುಂಬದವರಿಗೆ ವರ್ಗಾಯಿಸಿರುವುದು ಶ್ಲಾಘನೀಯ,” ಎಂದರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ, ಹಾಗೂ ಜಿಲ್ಲಾ ಅಧಿಕಾರಿಗಳು, ವಿವಿಧ ನಿಗಮಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ರಾಜ್ಯೋತ್ಸವದ ಅಂಗವಾಗಿ ನಡೆದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿಯ “ಭದ್ರ ಬಾಲ್ಯ” ಕಾರ್ಯಕ್ರಮದ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ದೊರಕಿತು. ಪಂಚ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ, ಹಾಗೂ ಜಲ ಜೀವನ್ ಮಿಷನ್ ಯೋಜನೆಗೆ ತೃತೀಯ ಬಹುಮಾನ ಲಭಿಸಿತು. ಶಾಲಾ ವಿಭಾಗದಲ್ಲಿ ಸಾಯಿ ಏಂಜಲ್ಸ್ ಶಾಲೆ ಪ್ರಥಮ ಸ್ಥಾನ, ಕೆಪಿಎಸ್ ಶಾಲೆ ದ್ವಿತೀಯ ಹಾಗೂ ಜೆವಿಎಸ್ ಶಾಲೆ ತೃತೀಯ ಸ್ಥಾನ ಪಡೆದವು. ಪೆರೇಡ್ ವಿಭಾಗದಲ್ಲಿ ಗೃಹರಕ್ಷಕದಳದ ತುಕಡಿ ಪ್ರಥಮ ಬಹುಮಾನ ಗೆದ್ದರೆ, ಎನ್ಸಿಸಿ (ಡಿಎಸಿಜಿ ಪಾಲಿಟೆಕ್ನಿಕ್) ಮತ್ತು ಉಪ್ಪಳ್ಳಿ ಜ್ಞಾನ ರಶ್ಮಿ ಶಾಲೆಯ ಸ್ಕೌಟ್ ಆ್ಯಂಡ್ ಗೈಡ್ಸ್ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿವೆ.