ಕಲಬುರ್ಗಿ, ಜು03(Daijiworld News/SS): ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಸುಭದ್ರವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಬರಗಾಲ ಕಾಮಗಾರಿ ಕೈಗೆತ್ತಿಕೊಳ್ಳಲು ಯಾವುದೇ ಹಣದ ಕೊರತೆ ಇಲ್ಲ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಖಾತೆಯಲ್ಲಿ ರೂ 600 ಕೋಟಿ ಹಣ ಇದೆ. ಕಲಬುರ್ಗಿ ಜಿಲ್ಲಾಧಿಕಾರಿ ಖಾತೆಯಲ್ಲಿರೂ 12 ಕೋಟಿ ಇದೆ ಎಂದು ಹೇಳಿದರು.
ಬರಗಾಲ ಕಾಮಗಾರಿಗಳನ್ನು ಪರಿಶೀಲಿಸಲು ಕಂದಾಯ, ಸಹಕಾರ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಚಿವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನಾನು ಈಗಾಗಲೇ 16 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಸಮ್ಮಿಶ್ರ ಸರ್ಕಾರದ ಕುರಿತು ಮಾತನಾಡಿದ ಅವರು, ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸುಭದ್ರವಾಗಿದೆ. ಶಾಸಕರ ರಾಜೀನಾಮೆ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಅದನ್ನು ಪಕ್ಷದ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಟ್ಯಾಂಕರ್ ನೀರು ಪೂರೈಕೆಯನ್ನು ಮೂರು ತಿಂಗಳಿಗಿಂತ ಹೆಚ್ಚು ವಿಸ್ತರಿಸಬಾರದು ಎಂಬುದು ಕೇಂದ್ರ ಸರ್ಕಾರದ ನಿಯಮ. ಆದಾಗ್ಯೂ, ಎಷ್ಟು ಬೇಕಾದರೂ ವಿಸ್ತರಿಸಬಹುದು ಎಂದು ಸಡಿಲಿಕೆ ನೀಡಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ರಚನೆಯಾದ ತಾಲ್ಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಚರ್ಚಿಸಲು ಇದೇ 4ರಂದು ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.