ಪಾಟ್ನಾ, ನ. 14 (DaijiworldNews/AA): ಬಿಹಾರ ಚುನಾವಣೆಯಲ್ಲಿ ಎನ್ಡಿಎ ಭಾರೀ ಮುನ್ನಡೆ ಸಾಧಿಸುತ್ತಿದೆ. ಇದರ ಮಧ್ಯೆ ಬಿಹಾರದಲ್ಲಿ ಗೆಲುವು ನಮ್ಮದೇ, ಇನ್ನೂ ಮುಂದೆ ಬಂಗಾಳದ ಸರದಿ. ನಾವು ಬಂಗಾಳದಲ್ಲಿಯೂ ಗೆಲುವು ಸಾಧಿಸುತ್ತೇವೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಹಾರದ ನಾಗರಿಕರು ಅರಾಜಕತೆ ಹಾಗೂ ಭ್ರಷ್ಟ ನಾಯಕತ್ವವನ್ನು ನೇರವಾಗಿ ತಿರಸ್ಕರಿಸುತ್ತಾರೆ. ಹೀಗಾಗಿ ನಾನು ಸ್ಪಷ್ಟವಾಗಿ ಹೇಳ್ತಿನಿ, ಬಿಹಾರದಲ್ಲಿ ಈ ಬಾರಿ ಗೆಲುವು ನಮ್ಮದು, ಇನ್ನೂ ಮುಂದೆ ಬಂಗಾಳದ ಸರದಿ. ನಾವು ಬಂಗಾಳದಲ್ಲಿಯೂ ಗೆಲುವು ಸಾಧಿಸುತ್ತೇವೆ. ಈಗಿರುವ ಸರ್ಕಾರ ಅವ್ಯವಸ್ಥೆಯಿಂದ ಕೂಡಿದೆ. ಹೀಗಾಗಿ ಅಲ್ಲಿನ ಜನರು ಅಂತಿಮವಾಗಿ ಉತ್ತಮ ನಾಯಕತ್ವವನ್ನು ಆಯ್ಕೆ ಮಾಡುತ್ತಾರೆ" ಎಂದು ಹೇಳಿದರು.
"ಬಿಹಾರ ಚುನಾವಣೆಯ ಫಲಿತಾಂಶವು, ಕಾನೂನು ಬಾಹಿರವಾಗಿರುವವರನ್ನು ತಿರಸ್ಕರಿಸಿ, ಅಭಿವೃದ್ಧಿಯತ್ತ ಸಾಗುವವರನ್ನು ಆಯ್ಕೆಮಾಡಿದೆ ಎಂಬುವನ್ನು ಪ್ರತಿಬಿಂಬಿಸುತ್ತದೆ. ನಾವು ಪ್ರಗತಿಯ ಪಥದತ್ತ ಸಾಗುತ್ತೇವೆ, ಕಳಪೆ ವಿವಿಗಳನ್ನು ಬದಲಾಯಿಸಿ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುತ್ತೇವೆ" ಎಂದರು.
"ಇಂದಿನ ಯುವಕರು ಬಿಹಾರದಲ್ಲಿ ಭ್ರಷ್ಟ ನಾಯಕರ ಆಳ್ವಿಕೆಯನ್ನು ನೋಡಲು ಬಯಸುವುದಿಲ್ಲ. ಫಲಿತಾಂಶದ ಬಳಿಕ ನಿತೀಶ್ ಕುಮಾರ್ ಅವರ ಅಡಿಯಲ್ಲಿ ಸರ್ಕಾರ ರಚನೆಯಾಗಲಿದೆ, ಅದರಲ್ಲಿ ಯಾವುದೇ ಗೊಂದಲವಿಲ್ಲ. ಇದಕ್ಕೂ ಮುನ್ನ ನಿತೀಶ್ ಕುಮಾರ್ ಅವರು ಪರಿಣಾಮಕಾರಿಯಾಗಿ ಸರ್ಕಾರವನ್ನು ಮುನ್ನಡೆಸಿದ್ದಾರೆ" ಎಂದು ತಿಳಿಸಿದರು.