ಸೂರತ್, ನ. 15 (DaijiworldNews/AK): ಬಿಹಾರ ಐತಿಹಾಸಿಕ ಗೆಲುವು ಸಾಧಿಸಿದೆ. ನಾವು ಬಿಹಾರದ ಜನರನ್ನು ಭೇಟಿಯಾಗದೆ ಸೂರತ್ನಿಂದ ಹೊರಟರೆ, ನಮ್ಮ ಪ್ರಯಾಣ ಅಪೂರ್ಣವೆಂದು ಭಾಸವಾಗುತ್ತದೆ. ಆದ್ದರಿಂದ, ಗುಜರಾತ್ನಲ್ಲಿ ಅದರಲ್ಲೂ ವಿಶೇಷವಾಗಿ ಸೂರತ್ನಲ್ಲಿ ವಾಸಿಸುವ ನನ್ನ ಬಿಹಾರಿ ಸಹೋದರ-ಸಹೋದರಿಯರ ಜೊತೆ ಈ ವಿಜಯೋತ್ಸವ ನಡೆಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಹಾರದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಯ ಅದ್ಭುತ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ವಿರೋಧ ಪಕ್ಷಗಳು ಹರಡಿದ ಜಾತಿ ಆಧಾರಿತ ರಾಜಕೀಯದ ವಿಷವನ್ನು ಬಿಹಾರ ರಾಜ್ಯ ತಿರಸ್ಕರಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ವಿಪಕ್ಷಗಳ ನಾಯಕರು ಜಾತಿ ಆಧಾರಿತ ರಾಜಕೀಯದ ವಿಷವನ್ನು ಹರಡುತ್ತಿದ್ದಾರೆ. ಈ ಬಾರಿ ಬಿಹಾರದ ಜನರು ಚುನಾವಣೆಯಲ್ಲಿ ಜಾತಿವಾದವನ್ನು ತಿರಸ್ಕರಿಸಿದ್ದಾರೆ” ಎಂದು ಮೋದಿ ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಚುನಾವಣಾ ಆಯೋಗದ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವ ಆರ್ಜೆಡಿ-ಕಾಂಗ್ರೆಸ್ ಜೋಡಿಯನ್ನು ಟೀಕಿಸಿದ ಮೋದಿ, ಅವರು ದ್ವೇಷದ ವಾತಾವರಣವನ್ನು ಹರಡುತ್ತಿದ್ದಾರೆ. ಆದರೂ ಎಲ್ಲಾ ವರ್ಗದ ಜನರು ಸರ್ವಾನುಮತದಿಂದ ಎನ್ಡಿಎಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.