ಬೆಂಗಳೂರು, ನ. 15 (DaijiworldNews/AK): ಉತ್ತರ ಕರ್ನಾಟಕ ಮತ್ತು ರೈತರ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಚೆಲ್ಲಾಟ ಆಡುತ್ತಿದೆ. ಅಲ್ಲದೇ, ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಧೋರಣೆ ವಿರುದ್ಧ ಹೋರಾಟ ರೂಪಿಸಲು ಇಂದಿನ ಬಿಜೆಪಿ ಪ್ರಮುಖರ ಸಭೆ ತೀರ್ಮಾನಿಸಿದೆ. ಮೆಕ್ಕೆಜೋಳ ಬೆಳೆಯುವ ರೈತರು ಸಂಕಷ್ಟದಲ್ಲಿದ್ದು, ಎಲ್ಲ ತಾಲ್ಲೂಕುಗಳಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ರಾಜ್ಯ ಸರಕಾರವು ತಕ್ಷಣ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಒತ್ತಾಯಿಸಲಿದೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದ ವ್ಯಾಪ್ತಿಯ 4 ಜಿಲ್ಲೆಗಳ ರೈತರನ್ನು ಸೇರಿಸಿಕೊಂಡು ಸ್ಥಳೀಯವಾಗಿ ಹೋರಾಟ ರೂಪಿಸಲಿದ್ದೇವೆ. ಎರಡನೇ ಬೆಳೆಗೂ ರಾಜ್ಯ ಸರಕಾರ ನೀರನ್ನು ಕೊಡಬೇಕು. ಒಂದು ವೇಳೆ ನೀರು ಬಿಡುಗಡೆ ಮಾಡಲು ಸಾಧ್ಯ ಆಗದೇ ಇದ್ದರೆ ರಾಜ್ಯ ಸರಕಾರವು ಆ ಭಾಗದ ರೈತರಿಗೆ ಎಕರೆಗೆ 25 ಸಾವಿರ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದ ಅಣೆಕಟ್ಟಿನ ಕುರಿತು ಸಾಕಷ್ಟು ಬಾರಿ ಚರ್ಚೆ ಆಗಿದೆ. 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದಾಗ ಡಿ.ಕೆ.ಶಿವಕುಮಾರ್ ಅವರು, ಆಂಧ್ರ, ತೆಲಂಗಾಣಕ್ಕೆ ಕಾಯುವುದಿಲ್ಲ; ರಾಜ್ಯ ಸರಕಾರವೇ ಆ ಜವಾಬ್ದಾರಿ ತೆಗೆದುಕೊಳ್ಳಲಿದೆ 32 ಹೊಸ ಕ್ರಸ್ಟ್ ಗೇಟ್ ಅಳವಡಿಸಬೇಕು; ರಾಜ್ಯ ಸರಕಾರ ಹಣ ಬಿಡುಗಡೆ ಮಾಡಲಿದೆ ಎಂದಿದ್ದರು. ಆದರೆ, ಸಮರೋಪಾದಿಯಲ್ಲಿ ನಡೆಯಬೇಕಿದ್ದ ಹೊಸ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಆಗದೇ ಇರುವುದು ದುರ್ದೈವ ಎಂದರು.
ಕಾಲುವೆಗಳ ದುರಸ್ತಿಗೆ ಹಣ ಬಿಡುಗಡೆಗೆ ಒತ್ತಾಯ
ತುಂಗಭದ್ರಾ ಜಲಾಶಯದ ಅಣೆಕಟ್ಟಿಗೆ 32 ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಮಾತ್ರವಲ್ಲದೇ ಎಡ- ಬಲ ನಾಲೆಗಳ ದುರಸ್ತಿ ಕಾರ್ಯ ನಡೆಸಬೇಕು. ಈ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಬೇಕು ಎಂದು ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದರು.
ಈಗಾಗಲೇ ಸಮಸ್ಯೆ ಕಾಡುತ್ತಿದೆ. ನೀರು ಪೋಲಾಗಿ ಹೋಗುತ್ತಿದೆ ಎಂದು ಗಮನ ಸೆಳೆದರು. ಈ ಮೂರು ವಿಷಯಗಳನ್ನು ಮುಂದಿಟ್ಟು ಬಿಜೆಪಿ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ರೂಪಿಸಲು ತೀರ್ಮಾನ ಮಾಡಿದೆ. ನವೆಂಬರ್ 26ರೊಳಗೆ ಹೋರಾಟ ರೂಪಿಸಲು ಚರ್ಚಿಸಿದ್ದೇವೆ ಎಂದರು.
ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಜಿಲ್ಲಾ ಪ್ರವಾಸ ಮಾಡಿ ಸ್ಥಳೀಯರ ಜೊತೆ ಚರ್ಚಿಸಿ ಹೋರಾಟದ ದಿನಾಂಕ ನಿಗದಿ ಮಾಡಲಿದ್ದಾರೆ ಎಂದು ಪ್ರಕಟಿಸಿದರು. ರೈತರ ವಿಚಾರದಲ್ಲಿ ರಾಜ್ಯ ಸರಕಾರ ಪದೇಪದೇ ಎಡವುತ್ತಿದೆ ಎಂದು ಟೀಕಿಸಿದರು.