ನವದೆಹಲಿ, ನ. 16 (DaijiworldNews/AK): ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿ 7 ದಿನಗಳ ಬಳಿಕ ಇದೀಗ ಲಾಲ್ ಕಿಲಾ ಮೆಟ್ರೋ ನಿಲ್ದಾಣವನ್ನು ಪುನಃ ತೆರೆಯಲಾಗಿದೆ.

ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಬಳಿ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಕಾಶ್ಮೀರಿ ಗೇಟ್ ಅನ್ನು ರಾಜಾ ನಹರ್ ಸಿಂಗ್ಗೆ ಸಂಪರ್ಕಿಸುವ ವೈಲೆಟ್ ಲೈನ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಿರಾಳತೆಯನ್ನುಂಟು ಮಾಡಿದೆ.
ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ಕೆಲವು ದಿನಗಳ ನಂತರ, ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಎಲ್ಲಾ ಗೇಟ್ಗಳನ್ನು ಮತ್ತೆ ತೆರೆದಿದೆ.
ಗುರುವಾರ ಕೆಂಪು ಕೋಟೆ ಸಂಕೀರ್ಣದ ಬಳಿ ಸಂಭವಿಸಿದ ಸ್ಫೋಟದ ನಂತರ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಯಿತು ಮತ್ತು ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದರಿಂದ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.ಸ್ಫೋಟ ಘಟನೆಯ ತನಿಖೆ ತೀವ್ರಗೊಂಡಿದ್ದು, ಹೊಸ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿ ಐ20 ಕಾರಿನಲ್ಲಿ ಬದರ್ಪುರ್ ಗಡಿಯ ಮೂಲಕ ದೆಹಲಿಗೆ ಪ್ರವೇಶಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ.