ಬೆಳಗಾವಿ, ನ. 16 (DaijiworldNews/AA): ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದ್ದು, ಮತ್ತೊಂದು ಕೃಷ್ಣಮೃಗ ಇಂದು ಸಾವನ್ನಪ್ಪಿದೆ. ಈ ಪೈಕಿ ಮೃತಪಟ್ಟ ಒಟ್ಟು ಕೃಷ್ಣಮೃಗಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳು, ನ. 16ರಂದು 20 ಕೃಷ್ಣ ಮೃಗಗಳು ಮತ್ತೆ ಮೃತಪಟ್ಟಿದ್ದವು. ಇಂದು ಮತ್ತೆ ಒಂದು ಕೃಷ್ಣಮೃಗ ಸಾವನ್ನಪ್ಪಿದೆ.
ಮೃತ ಕೃಷ್ಣ ಮೃಗಗಳ ಕಿಡ್ನಿ, ಹಾರ್ಟ್, ಲಿವರ್, ರಕ್ತ ಎಲ್ಲವನ್ನೂ ಸ್ಯಾಂಪಲ್ ಪಡೆದಿದ್ದೇವೆ. ಅವು ಲ್ಯಾಬ್ಗೆ ರವಾನೆಯಾಗಲಿದ್ದು, ಮಂಗಳವಾರದ ಹೊತ್ತಿಗೆ ಕೃಷ್ಣಮೃಗಗಳ ಸಾವಿನ ಕುರಿತ ವರದಿ ಬರಲಿದೆ. ಬಳಿಕ ಅದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಅವರಿಗೆ ಸಲ್ಲಿಸುತ್ತೇವೆ ಎಂದು ವೈದ್ಯ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಳಿದ್ದು ಆ ಪೈಕಿ 29 ಸಾವನ್ನಪ್ಪಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.