ಮಂಡ್ಯ, ನ. 18 (DaijiworldNews/AK): ಎರಡು ದಿನಗಳ ಹಿಂದೆ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿಯ ನಾಲೆಗೆ ಬಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಿದ್ದಾರೆ.

ಶಿವವಸಮುದ್ರ ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಆನೆ ಓಡಾಡುವುದನ್ನು ಅಲ್ಲಿನ ಅಧಿಕಾರಿಗಳು ಗಮನಿಸಿದ್ದರು. ಆದರೆ ಶನಿವಾರ ರಾತ್ರಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಸುವ ಸುಮಾರು 20 ಅಡಿ ಆಳದ ಕೆನಲ್ ಗೇಟ್ ಮೂಲಕ ಕಾಡಾನೆ ನಾಲೆಗೆ ಇಳಿದಿದೆ. ಆದರೆ ನೀರಿನ ಹರಿವಿನ ರಭಸ ಹೆಚ್ಚಾಗಿದ್ದರಿಂದ ಮತ್ತೆ ಮರಳಿ ಬರಲು ಸಾಧ್ಯವಾಗಿರಲಿಲ್ಲ.
ಭಾನುವಾರ ಆನೆ ಕಾಣದಿರುವುದನ್ನು ಗಮನಿಸಿದ ಅಧಿಕಾರಿಗಳಿಗೆ ಆನೆ ನಾಲೆಗೆ ಇಳಿದಿರುವ ವಿಷಯ ಗೊತ್ತಾಗಿದೆ. ಬಳಿಕ ಸಂಜೆವರೆಗೆ ಆನೆ ಮೇಲೆ ಬರುತ್ತದೆ ಎಂದು ಕಾದು ನೋಡಿದರೂ ಕೂಡ ಆನೆ ಮೇಲೆ ಬಂದಿಲ್ಲ. ಹೀಗಾಗಿ ಡಿಸಿಎಫ್ ರಘು ಹಾಗೂ ವನ್ಯಜೀವಿ ವಲಯ ಮೈಸೂರು ವಿಭಾಗ ಡಿಸಿಎಫ್ ಪ್ರಭು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ನಾಲೆಯ ನೀರಿನ ಪ್ರಮಾಣವನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಆರಂಭದಲ್ಲಿ ಅಧಿಕಾರಿಗಳು ಆನೆಗೆ ಆಹಾರ ನೀಡಿ, ಗನ್ನಲ್ಲಿ ಶೂಟ್ ಮಾಡುವ ಮೂಲಕ ಅರವಳಿಕೆ ಮದ್ದು ನೀಡಿದ್ದರು. ಆನೆ ಪ್ರಜ್ಞೆ ತಪ್ಪಿದ ಬಳಿಕ ಹೈಡ್ರಾಲಿಕ್ ಕ್ರೇನ್ ಮೂಲಕ ಹಗ್ಗವನ್ನು ಕಟ್ಟಿ ಕಂಟೇನರ್ ಮೇಲೆ ಇಟ್ಟು ಆನೆಯನ್ನು ಮೇಲಕ್ಕೆ ಎತ್ತಲಾಗಿದೆ.