ಬೆಂಗಳೂರು, ನ. 18 (DaijiworldNews/AK): ಪ್ರಿಯಾಂಕ್ ಖರ್ಗೆಯವರು ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಅವರು ಹೇಳಿರುವ ಮಾತುಗಳೆಲ್ಲವೂ ಅಪ್ಪಟ ಸುಳ್ಳು ಎಂದು ಟೀಕಿಸಿದರು. ತಮ್ಮ ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ಆಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ, ಇವತ್ತು ಪಥ ಸಂಚಲನ ನಡೆದಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ನನ್ನ ಕೈಯಲ್ಲಿ ಅಧಿಕಾರವಿದ್ದರೆ ಇವತ್ತೇ ಆರೆಸ್ಸೆಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಹೇಳಿದ್ದರು. ಅದು ಅವರಿಗೆ ಈ ಜನ್ಮದಲ್ಲಿ ಆಗಲಾರದ ವಿಷಯ ಎಂದು ಸವಾಲೆಸೆದರು. ನೀವು ಅನುಮತಿ ಕೊಟ್ಟಿದ್ದಾಗಿ ಹೇಳಿದ್ದೀರಿ; ಅದು ನಿಮ್ಮ ಅನುಮತಿಯಲ್ಲ; ಅದು ನ್ಯಾಯಾಲಯದಿಂದ ಸಿಕ್ಕಿದೆ ಎಂದು ಗಮನಕ್ಕೆ ತಂದರು.
ಸರಣಿ ಸುಳ್ಳು ಹೇಳುವ ಸುಳ್ಳುಗಾರ ಇದ್ದರೆ ಅದು ಪ್ರಿಯಾಂಕ್ ಖರ್ಗೆ ಎಂದರು. ಇರಲಾರದೆ ಇರುವೆ ಬಿಟ್ಟುಕೊಂಡು ಈಗ ಕಚ್ಚಿಸಿಕೊಂಡು ಓಡಾಡುತ್ತಿದ್ದಾರೆ; ಅವರಿಗೆ ಇರುವೆ ಬಹಳ ಕಚ್ಚಿದೆ ಎಂದು ತಿಳಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಬ್ ಸ್ಫೋಟದ ವಿಷಯವನ್ನು ಧರ್ಮ- ಜಾತಿಗೆ ಹೋಲಿಕೆ ಮಾಡಬಾರದೆಂದು ಪದೇಪದೇ ಹೇಳುತ್ತೇವೆ. ಆದರೆ ಆಗಿದ್ದೇನು? ಸಂಸತ್ ಮೇಲೆ ದಾಳಿ, ಪುಲ್ವಾಮಾ ದಾಳಿ- ಒಂದು ಧರ್ಮದವರಿಂದ ನಡೆದಿದೆ. ದಾಳಿಯ ಹಿನ್ನೆಲೆ ಗಮನಿಸಿದರೆ ಅದು ಒಂದು ಧರ್ಮದವರೇ ಆಗಿದ್ದಾರೆ ಯಾಕೆ ಎಂದು ಕೇಳಿದರು. ಅವರೆಲ್ಲರನ್ನೂ ನಾವು ಹುತಾತ್ಮರು ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ದೇಶಕ್ಕೆ ಆಪತ್ತು ಬಂದಾಗ ಅದನ್ನು ವಿರೋಧಿಸಿ ಹೋರಾಟ ಮಾಡಿ ಬಲಿದಾನ ಆದರೆ ಅದನ್ನು ಹುತಾತ್ಮರೆಂದು ಗುರುತಿಸಬಹುದು ಎಂದು ವಿಶ್ಲೇಷಿಸಿದರು. ಇಲ್ಲಿ ಸ್ವಾರ್ಥ ಸಾಧನೆಯ ಚಟುವಟಿಕೆಯಲ್ಲಿ ಬಲಿಯಾಗಿದ್ದಾರೆ ಎಂದರು.