ಬೆಂಗಳೂರು,ನ. 21 (DaijiworldNews/AK): ಕೇವಲ 5 ಲಕ್ಷ ಕೋಟಿ ಸಾಲ ಮಾಡಿದ್ದೇ ಇವರ ಸಾಧನೆ. ರಾಜ್ಯ ಸಂಪೂರ್ಣ ದಿವಾಳಿ ಆಗಿದ್ದು ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಗೋವಿಂದ ಕಾರಜೋಳ ಅವರು ಒತ್ತಾಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ. ಭ್ರಷ್ಟಾಚಾರ ಮತ್ತು ಅಧಿಕಾರದ ಆಸೆಗಾಗಿ ಕಚ್ಚಾಟ ಬಿಟ್ಟರೆ ಬೇರೆ ಯಾವುದೇ ಕೆಲಸವನ್ನು ಇವರಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಕಾಣಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಬೆಂಗಳೂರು ಪ್ರಪಂಚದಲ್ಲೇ ಹೆಸರು ಮಾಡಿದ ನಗರ. ಇವರ ಕೈಯಲ್ಲಿ ಇದು ನರಕ ಆಗಿದೆ. ಇಲ್ಲಿ ಕೇವಲ ಗುಂಡಿಗಳಷ್ಟೇ ಅಲ್ಲ; ಯಾವ ವ್ಯವಸ್ಥೆಯೂ ಸರಿ ಇಲ್ಲ. ಆಡಳಿತ ವ್ಯವಸ್ಥೆ ಸರಿ ಇಲ್ಲ; ಬ್ಯಾಂಕ್ಗಳ ದರೋಡೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಒಂಟಿ ಮಹಿಳೆಯರನ್ನು ಗಮನಿಸಿ ಕೊಲೆ ಮಾಡಿ ದರೋಡೆ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಎಸ್ಸಿ- ಎಸ್ಟಿ ಜನಾಂಗದವರ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಮತಬ್ಯಾಂಕ್ ರಾಜಕಾರಣಕ್ಕಾಗಿ ಬಳಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ಸರಕಾರ ಆಡಳಿತವನ್ನೂ ಸರಿಯಾಗಿ ಮಾಡುತ್ತಿಲ್ಲ; ಅಭಿವೃದ್ಧಿಯೂ ಮಾಡುತ್ತಿಲ್ಲ ಎಂದು ಟೀಕಿಸಿದರು.