ನವದೆಹಲಿ, ಜು05(Daijiworld News/SS): ಸರ್ಕಾರದ ಮೊದಲ ಬಜೆಟ್'ಗೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್'ರ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಆರ್ಥಿಕತೆಯನ್ನು ಸಮತೋಲನಕ್ಕೆ ತರುವ ಮಹತ್ವದ ಜವಾಬ್ದಾರಿಯನ್ನು ಹೊತ್ತು ನಿರ್ಮಲಾ ಸೀತಾರಾಮನ್ ಮೊದಲ ಬಜೆಟ್ ಮಂಡಿಸಲಿದ್ದಾರೆ.
ಭರ್ಜರಿ ಬಹುಮತದೊಂದಿಗೆ 2ನೇ ಬಾರಿ ಅಧಿಕಾರಕ್ಕೇರಿರುವ ಮೋದಿ ಸರಕಾರದ 2ನೇ ಅವಧಿಯ ಮೊದಲ ಬಜೆಟ್ ಇದಾಗಿದ್ದು, ಆರ್ಥಿಕ ಸುಸ್ಥಿರತೆ ಮತ್ತು ಅಭಿವೃದ್ಧಿಯೇ ಮೇಲುಗೈ ಸಾಧಿಸುವುದು ಖಚಿತವಾಗಿದೆ.
ಇದೇ ಮೊದಲ ಬಾರಿಗೆ ವಿತ್ತ ಇಲಾಖೆಯ ಜವಾಬ್ದಾರಿ ಹೊತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಸಂಸತ್ ನಲ್ಲಿ ಬಜೆಟ್ ಮಂಡಿಸುತ್ತಿದ್ದು, ಭಾರತದ ಸಂಸತ್ ಇತಿಹಾಸದಲ್ಲಿ ಹಣಕಾಸು ಖಾತೆ ಪಡೆದ, ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರೂ ಕೂಡ ಬಜೆಟ್ ಮಂಡಿಸಿದ್ದರಾದರೂ, ಇಂದಿರಾ ಗಾಂಧಿ ಅವರ ಬಳಿಕ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆಯಾದ ಗೌರವಕ್ಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಇದು ಮೊದಲ ಬಜೆಟ್ ಆಗಿದೆ.
ಚುನಾವಣೆಗೂ ಮುನ್ನ ಕಳೆದ ಫೆಬ್ರವರಿ 1ರಂದು ಅಂದಿನ ವಿತ್ತ ಸಚಿವ ಪಿಯೂಶ್ ಗೋಯೆಲ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದರು. ಅದರಲ್ಲಿ ಘೋಷಿಸಲಾಗಿದ್ದ ಬಹುತೇಕ ಅಂಶಗಳನ್ನ ಹಾಲಿ ಬಜೆಟ್'ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮುಂದುವರಿಸುವ ನಿರೀಕ್ಷೆ ಇದೆ.
ರೈತರ ಮತ್ತು ಕೃಷಿ ವಲಯದ ಸಮಸ್ಯೆಗಳು, ಮಧ್ಯಮ ವರ್ಗಕ್ಕೆ ತೆರಿಗೆ ಸುಧಾರಣಾ ಕ್ರಮ ಈ ಬಾರಿಯ ಬಜೆಟ್ನ ಪ್ರಮುಖ ಅಂಶವಾಗಲಿದೆ. ಚುನಾವಣೆ ನಂತರ ಜನರಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದಂತೇ ಬಜೆಟ್ ಮಂಡಿಸಲಿದೆ. ಅಲ್ಲದೆ ಆರ್ಥಿಕತೆಯ ಸುಧಾರಣೆಗೆ ತಕ್ಷಣದ ಕ್ರಮಗಳ ಕುರಿತು ಬಜೆಟ್ನಲ್ಲಿ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಸಲದ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಈಗಿನ 2.5 ಲಕ್ಷ ರೂ.ಗಳಿಂದ ಏರಿಸುವ ಸಾಧ್ಯತೆ ಇದೆ. 2014ರಲ್ಲಿ ಕೊನೆಯ ಬಾರಿಗೆ ಮಿತಿ ವಿಸ್ತರಿಸಲಾಗಿತ್ತು. ಹೀಗಾಗಿ ಈ ಸಲ ನಿರೀಕ್ಷೆ ಹೆಚ್ಚಿದೆ. ಬಜೆಟ್ನಲ್ಲಿ ರೈತರಿಗೆ ಅನುಕೂಲವಾಗುವಂತೆ ಕನಿಷ್ಠ ಆದಾಯ ಯೋಜನೆ, ಎಂಎಸ್ಪಿ ಹೆಚ್ಚಳ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.