ಮುಂಬೈ, ಜು 10 (Daijiworld News/MSP): ಅತೃಪ್ತರ ಮನವೊಲಿಕೆಗೆ ಹಾಗೂ ಭೇಟಿಗೆ ಬುಧವಾರ ಬೆಳಗ್ಗಿನಿಂದ ರಿನೈಸನ್ಸ್ ಹೊಟೇಲ್ ಮುಂದೆ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಷೇಧಾಜ್ಞೆ ನಡುವೆಯೂ ಹೋಟೆಲ್ ಮುಂದೆ ಕುಳಿತಿದ್ದ ಶಿವಕುಮಾರ್ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು, ಹೀಗಾಗಿ ಸಚಿವ ಶಿವಕುಮಾರ್ ಅವರನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಡಿಕೆಶಿ ಅವರ ಜೊತೆಯಲ್ಲಿದ್ದ ಸಚಿವ ಜಿಟಿಡಿ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ.
ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು. ಆದರೆ ರೂಂ ಬೇರೆ ಕಟ್ಟಡದಲ್ಲಿ ನೀಡುವ ಬಗ್ಗೆ ತಿಳಿದ ಡಿಕೆಶಿ ನಮ್ಮ ಶಾಸಕರಿರುವ ಕಟ್ಟಡದಲ್ಲಿಯೇ ರೂಂ ಬೇಕು ಎಂದು ಹಟ ಹಿಡಿದಿದ್ದರು. ಈ ಸಂದರ್ಭ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿತ್ತು. ಒಡೆದ ಕುಟುಂಬ ಸರಿ ಮಾಡಲು ಬಂದಿದ್ದು, ಬೆದರಿಕೆ ಹಾಕುಲು ಅಲ್ಲ ಎಂದು ಹೇಳಿ ಡಿಕೆಶಿ ಪ್ರತಿಭಟನೆ ನಡೆಸಲು ಮುಂದಾದರು.
ಈ ವೇಳೆ ವಶಕ್ಕೆ ಪಡೆದ ಪೊಲೀಸರು ತಮ್ಮ ವ್ಯಾನಿನಲ್ಲಿ ಕರೆದುಕೊಂಡು ಹೋಗಿ, ಕಲಿನಾ ವಿಶ್ವವಿದ್ಯಾನಿಲಯದ ವಿಶ್ರಾಂತಿ ಗೃಹಕ್ಕೆ ಸ್ಥಳಾಂತರಿಸಿದರು.