ಬೆಂಗಳೂರು, ಡಿ. 18(DaijiworldNews/TA): ಸಾಮಾನ್ಯವಾಗಿ ರಾಜ್ಯ, ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಎಂದರೆ ಕಾನೂನು, ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ಇರುತ್ತದೆ. ಸಂಘಟನೆಗಳು ಅಥವಾ ಸಮುದಾಯಗಳಿಗೆ ಆಂತರಿಕ ನಿಯಮಾವಳಿಗಳಿದ್ದರೂ, ಸರ್ಕಾರದಂತೆಯೇ ಆಡಳಿತ ನಡೆಸುವ ಅಧಿಕಾರವಿರುವುದಿಲ್ಲ. ಆದರೆ ಬೆಂಗಳೂರಿನ ಒಂದು ಅಪಾರ್ಟ್ಮೆಂಟ್ ಮಾತ್ರ ತನ್ನದೇ ಆದ ಕಾನೂನು, ಪೊಲೀಸ್ ಹಾಗೂ ನ್ಯಾಯ ವ್ಯವಸ್ಥೆ ನಡೆಸಿಕೊಂಡು ಅಕ್ರಮ ಎಸಗಿದವರಿಂದ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಾವಿಡೆಂಟ್ ಸನ್ವರ್ತ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್’ ವಿರುದ್ಧ ಅನಾಮಧೇಯ ವಿಷಲ್ ಬ್ಲೋವರ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಅಪಾರ್ಟ್ಮೆಂಟ್ ಆಡಳಿತವು ಜುಲೈ 2025ರಲ್ಲಿ ಅಕ್ರಮ ವಸ್ತುಗಳ ಸಾಗಾಟ ಆರೋಪದಡಿ ಏಳು ಮಂದಿ ನಿವಾಸಿಗಳು ಹಾಗೂ ಒಬ್ಬ ಸಂದರ್ಶಕರಿಂದ ಪ್ರತ್ಯೇಕವಾಗಿ 20,000 ರೂ. ಮತ್ತು 30,000 ರೂ.ಗಳಂತೆ ದಂಡ ಸಂಗ್ರಹಿಸಿತ್ತು. ಆಗಸ್ಟ್ನಲ್ಲಿ ಮಾದಕವಸ್ತು ಸೇವನೆ ಅಥವಾ ಸಂಬಂಧಿತ ಚಟುವಟಿಕೆಗಳ ಆರೋಪದಡಿ ಐವರು ನಿವಾಸಿಗಳಿಂದ 25,000 ರೂ. ರಿಂದ 30,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿತ್ತು. ಇದೇ ತಿಂಗಳಲ್ಲಿ ಇನ್ನೂ 30,000 ರೂ. ದಂಡ ಬಾಕಿ ಇದೆ ಎಂದು ತಿಳಿಸಲಾಗಿತ್ತು ಎನ್ನಲಾಗಿದೆ.
ಅಕ್ಟೋಬರ್ನಲ್ಲಿ ಫ್ಲಾಟ್ನಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಇರಿಸಿಕೊಂಡ ಆರೋಪದಡಿ ಮೂವರು ಸಂದರ್ಶಕರು ಮತ್ತು ಇಬ್ಬರು ನಿವಾಸಿಗಳಿಂದ 10,000 ರೂ. ರಿಂದ 50,000 ರೂ.ವರೆಗೆ ದಂಡ ಸಂಗ್ರಹಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಅಕ್ರಮಗಳಲ್ಲಿ ತೊಡಗಿಕೊಂಡವರಲ್ಲಿ ಹಲವರು ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಒಂದು ಪ್ರಕರಣದಲ್ಲಿ, ನಿವಾಸಿಯೊಬ್ಬ ಮನೆ ಕೆಲಸದಾಕೆಗೆ ಮುತ್ತಿಟ್ಟ ಘಟನೆ ನಡೆದಿದ್ದು, ಅದಕ್ಕೆ 20,000 ರೂ. ದಂಡ ವಿಧಿಸಿ ವಿಷಯವನ್ನು ‘ಬಗೆಹರಿಸಿಕೊಂಡು’ ಪ್ರಕರಣ ಮುಚ್ಚಲಾಗಿತ್ತು. ಸದಸ್ಯರ ಮನಸ್ಥಿತಿ ಅಥವಾ ಆರೋಪಿಯ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ದಂಡದ ಮೊತ್ತ ನಿಗದಿಪಡಿಸಲಾಗುತ್ತಿತ್ತು ಎಂದು ವಿಷಲ್ ಬ್ಲೋವರ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ (KAOA), 1972 ಮತ್ತು ಅದರ ನಿಯಮಗಳು, 1974ರ ಅಡಿಯಲ್ಲಿ ಅಪಾರ್ಟ್ಮೆಂಟ್ ಬೈಲಾಗಳನ್ನು ರೂಪಿಸಲಾಗಿದ್ದರೂ, ಇಂಥ ದಂಡ ವಿಧಿಸುವ ಅಥವಾ ನ್ಯಾಯಾಂಗ ಅಧಿಕಾರ ಬಳಸುವ ಅವಕಾಶ ಕಾನೂನಿನಲ್ಲಿ ಇಲ್ಲ. ಅಪಾರ್ಟ್ಮೆಂಟ್ ಬೈಲಾಗಳ ಪ್ರಕಾರ, ಆಸ್ತಿಯ ನಿರ್ವಹಣೆ ಮಾತ್ರ ಓನರ್ಸ್ ಅಸೋಸಿಯೇಷನ್ ಜವಾಬ್ದಾರಿಯಾಗಿದ್ದು, ದಂಡ ವಿಧಿಸುವ ಅಧಿಕಾರ ಅದಕ್ಕೆ ಇಲ್ಲ ಎಂದು ವಿಷಲ್ ಬ್ಲೋವರ್ ಸ್ಪಷ್ಟಪಡಿಸಿದ್ದಾರೆ.
ಈ ದೂರಿನ ಆಧಾರದಲ್ಲಿ ಕುಂಬಳಗೋಡು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಯಾವುದೇ ಅಪರಾಧ ಅಥವಾ ಅಕ್ರಮ ಘಟನೆಗಳು ನಡೆದರೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ನಿವಾಸಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ.