ಬೆಳಗಾವಿ, ಡಿ. 18(DaijiworldNews/TA): ಹೈದರಾಬಾದ್ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ಭಾಗದ ದಶಕಗಳ ಕನಸಾದ 371(ಜೆ) ವಿಧಿ ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಬುಧವಾರ ವಿಧಾನಪರಿಷತ್ನಲ್ಲಿ ಒತ್ತಾಯಿಸಿದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸದನದಲ್ಲಿ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರು, ಮಲ್ಲಿಕಾರ್ಜುನ ಖರ್ಗೆ ಅವರ ಸೇವೆಯನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸೇವೆಗೆ ಹೋಲಿಸಿದರು. “ಡಾ. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದರೆ, ಖರ್ಗೆ ಅವರು ಈ ಭಾಗಕ್ಕೆ 371(ಜೆ) ವಿಧಿಯ ಕೊಡುಗೆ ನೀಡಿದ್ದಾರೆ. ಅಂಬೇಡ್ಕರ್ ಅವರಂತೆಯೇ ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿ ಅದ್ಭುತ ಸೇವೆ ಸಲ್ಲಿಸಿದ್ದಾರೆ” ಎಂದು ಅವರು ಸ್ಮರಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಖರ್ಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ ಕಮಕನೂರು, ಖರ್ಗೆ ಅವರು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಇಎಸ್ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಮಹತ್ವದ ಯೋಜನೆಗಳನ್ನು ತಂದಿದ್ದಾರೆ. ರೈಲ್ವೆ ಸಚಿವರಾಗಿದ್ದಾಗ ಹೊಸ ರೈಲು ಮಾರ್ಗಗಳನ್ನು ಆರಂಭಿಸುವ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದು ಪ್ರಶಂಸಿಸಿದರು.
ಕೇವಲ ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೆ, ದೇಶದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಸೇವೆ ಅನನ್ಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಅವರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಬೇಕು ಎಂದು ತಿಪ್ಪಣ್ಣಪ್ಪ ಕಮಕನೂರು ಸದನದ ಮೂಲಕ ಮನವಿ ಮಾಡಿದರು.