ಬೆಳಗಾವಿ, ಡಿ. 18(DaijiworldNews/TA): ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೀಡಿದ “ನೀವು ಕರಾವಳಿಯವರು ಬೆಂಕಿ ಹಚ್ಚುವವರು” ಎಂಬ ಹೇಳಿಕೆ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರ ಉಂಟಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದ ಘಟನೆ ಸದನದ ಕಲಾಪದ ದಿಕ್ಕನ್ನೇ ಬದಲಿಸಿತು.

ಸದನದಲ್ಲಿ ಚರ್ಚೆಯ ವೇಳೆ ಭೈರತಿ ಸುರೇಶ್ ಅವರು ಬಿಜೆಪಿ ಶಾಸಕರನ್ನು ಉದ್ದೇಶಿಸಿ ಈ ಹೇಳಿಕೆಯನ್ನು ನೀಡಿದ್ದು, ಸದನದಲ್ಲಿ ತೀವ್ರ ಕಿಚ್ಚು ಹಚ್ಚಿತು. ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಚನ್ನಬಸಪ್ಪ ಅವರು ಒಟ್ಟಾಗಿ ವಾಗ್ದಾಳಿ ನಡೆಸಿ, “ಕರಾವಳಿ ಸಂಸ್ಕೃತಿಗೆ ನೀವು ಅಪಮಾನ ಮಾಡಿದ್ದೀರಿ, ಕೂಡಲೇ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.
ಸುನಿಲ್ ಕುಮಾರ್ ಸದನದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಪ್ರಶ್ನಿಸಿ, “ನೀವೂ ಕರಾವಳಿಯವರಲ್ಲವೇ? ಸಚಿವರು ಇಡೀ ಕರಾವಳಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಲ್ಲಾ? ಪೀಠದಿಂದ ಹೊರಗೆ ಬನ್ನಿ” ಎಂದು ಸವಾಲು ಹಾಕಿದರು. ಸ್ಪೀಕರ್ ವಿವಾದಾತ್ಮಕ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ತಿಳಿಸಿದರೂ, ಬಿಜೆಪಿ ಶಾಸಕರು ಸಮಾಧಾನಗೊಳ್ಳದೆ ಪ್ರತಿಭಟನೆ ನಡೆಸಿದರು.
ಬಿಜೆಪಿ ಶಾಸಕರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೂ ಸಭಾಧ್ಯಕ್ಷರು ‘ದ್ವೇಷ ಭಾಷಣ ತಡೆ ವಿಧೇಯಕ’ ಅಂಗೀಕರಿಸಿದರು. ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸದನದಲ್ಲೇ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. “ಇದು ದ್ವೇಷ ಭಾಷಣ ವಿರೋಧಿ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಬಿಲ್” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು. ಸಚಿವ ಭೈರತಿ ಸುರೇಶ್ ಅವರ ಕ್ಷಮೆಗೆ ಪಟ್ಟು ಹಿಡಿದು, ವಿಧೇಯಕದ ಮರುಪರಿಶೀಲನೆಗೆ ಆಗ್ರಹಿಸಿದ ಬಿಜೆಪಿ ಸದಸ್ಯರ ಕಾರಣದಿಂದ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.