ಬೆಳಗಾವಿ, ಡಿ. 18 (DaijiworldNews/AK):ಕಂದಾಯ ಸಚಿವರ ಅಕ್ರಮಗಳ ಕುರಿತಂತೆ ಇವತ್ತು ಸದನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ಕಂದಾಯ ಸಚಿವರ ವಿರುದ್ಧ ನಾವು ಮಾಡಿದ ಆರೋಪ ಗಂಭೀರ ಸ್ವರೂಪದ್ದು. ಕಂದಾಯ ಸಚಿವರಾದ ಅವರು ಸರಿಯಾಗಿ ದಾಖಲಾತಿ ಪರಿಶೀಲಿಸದೇ ‘ನಮ್ಮ ತಂದೆ ಕಾಲದ್ದು, ನಮ್ಮ ತಾತನ ಕಾಲದ್ದು’ ಎಂದು ಅಕ್ರಮ ನಡೆಸಬಹುದೇ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಹಾಗಿದ್ದರೆ ಎಂದು ಪ್ರಶ್ನಿಸಿದರು.
ಜವಾಬ್ದಾರಿಯುತ ಸಚಿವೆ ಸದನಕ್ಕೆ ತಪ್ಪು ಮಾಹಿತಿ ಕೊಡುವುದು ಖಂಡಿತ ಸರಿಯಲ್ಲ ಎಂದು ಅವರು ಲಕ್ಷ್ಮಿ ಹೆಬ್ಬಾಳ್ಕರ್ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಇದರ ಕುರಿತು ಬಿಜೆಪಿ- ಜೆಡಿಎಸ್ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ತಿಳಿಸಿದರು. ಗೃಹಲಕ್ಷ್ಮಿ ಕುರಿತು ತಪ್ಪು ಮಾಹಿತಿ ನೀಡಿದ ಸಚಿವರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ಮಾಹಿತಿಯೂ ಸಚಿವರ ಬಳಿ ಇರದಿದ್ದರೆ ಅದು ಖಂಡಿತ ಸರಿಯಲ್ಲ ಎಂದು ನುಡಿದರು. ಗ್ಯಾರಂಟಿಗಳ ಪರಿಣಾಮವಾಗಿ ಸಾರಿಗೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಸರಿಯಾಗಿ ಸಂಬಳ ಕೊಡಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಹಳಿ ತಪ್ಪಿದ ಆಡಳಿತ..
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಬರುವ ದಿನಗಳಲ್ಲಿ ಇವರ ಬಂಡವಾಳ ಇನ್ನಷ್ಟು ಬಯಲಾಗಲಿದೆ. ತಾನೆಷ್ಟು ದಿನ ಮುಖ್ಯಮಂತ್ರಿಗಳಾಗಿ ಇರುತ್ತೇನೋ ಎಂಬ ಗೊಂದಲ ಸಿದ್ದರಾಮಯ್ಯರನ್ನು ಕಾಡುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಕಳೆದೊಂದು ವರ್ಷದಲ್ಲಿ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ ಎಂದು ಟೀಕಿಸಿದರು. ಒಳಜಗಳ, ಡಿನ್ನರ್ ಮೀಟಿಂಗ್ ಬೆಳಗಾವಿಯಲ್ಲೂ ಮುಂದುವರೆದಿದೆ. ಸಿಎಂ, ಸಚಿವರು, ಶಾಸಕರ ನಡುವಿನ ಒಳಜಗಳದಿಂದ, ಸಿಎಂ ವಿಚಾರದಲ್ಲಿ ಪೈಪೋಟಿಯ ಪರಿಣಾಮವಾಗಿ ಆಡಳಿತ ಹಳಿ ತಪ್ಪಿದ್ದು ಸತ್ಯ ಎಂದರು.