ನವದೆಹಲಿ, ಡಿ. 18 (DaijiworldNews/AA): ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಜಿ ರಾಮ್ ಜಿ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕಾರಿಸಲಾಯಿತು.

20 ವರ್ಷಗಳಷ್ಟು ಹಳೆಯದಾದ ಎಂಜಿಎನ್ಆರ್ಇಜಿಎ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಬದಲಿಗೆ ಪ್ರತಿ ವರ್ಷ 125 ದಿನಗಳವರೆಗೆ ಗ್ರಾಮೀಣ ಉದ್ಯೋಗಗಳನ್ನು ಖಾತರಿಪಡಿಸುವ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆಯನ್ನು ಅಂಗೀಕರಿಸಲಾಯಿತು.
ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೂ, "ಲೋಕಸಭೆಯು ಜಿ ರಾಮ್ ಜಿ ಮಸೂದೆ ಅಂಗೀಕರಿಸಿದೆ" ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು. ಇನ್ನು ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟಿದ್ದನ್ನು ವಿರೋಧಿಸಿ, ಪ್ರತಿಪಕ್ಷ ಸದಸ್ಯರು ವಿಧೇಯಕದ ಪ್ರತಿಯನ್ನು ಹರಿದು ಹಾಕಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯವನ್ನು ಸ್ಪೀಕರ್ ಓಂ ಬಿರ್ಲಾ ತಿರಸ್ಕರಿಸಿದರು. "ಶಾಸನದ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿದೆ" ಎಂದು ತಿಳಿಸಿದರು.