ಬೆಳಗಾವಿ,ಡಿ. 18 (DaijiworldNews/ AK): ಕಾಂಗ್ರೆಸ್ ಪಕ್ಷವು ದ್ವೇಷ ಭಾಷಣ ನಿಯಂತ್ರಣ ಮಸೂದೆ ಮೂಲಕ ವಿಪಕ್ಷದ ಧ್ವನಿ ಅಡಗಿಸುವ ಕೆಲಸ ಮಾಡಲು ಹೊರಟಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.ಈ ಮಸೂದೆ ಮೂಲಕ ಪತ್ರಕರ್ತರ ಧ್ವನಿಯನ್ನೂ ನಿಯಂತ್ರಿಸುವ ಕೆಲಸ ಮಾಡಲು ಹೊರಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಯಾರಾದರೂ ತಮ್ಮ ಅಭಿಪ್ರಾಯ ತಿಳಿಸಿದರೆ, ಅದನ್ನು ಹತ್ತಿಕ್ಕಿ, 7-8 ವರ್ಷ ಜೈಲಿಗೆ ಹಾಕುವ ದುಸ್ಸಾಹಸಕ್ಕೆ ಹೊರಟಿದ್ದಾರೆ ಎಂದು ಆಕ್ಷೇಪಿಸಿದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇದನ್ನು ವಿರೋಧಿಸಲಿದ್ದೇವೆ ಎಂದು ತಿಳಿಸಿದರು.
ಸ್ಪೀಕರ್ ಅವರು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ದೂರಿದರು. ಬೈರತಿ ಸುರೇಶ್ ಅವರು ಕರಾವಳಿ ಭಾಗದ ಮತದಾರರಿಗೆ ಅಪಮಾನ ಮಾಡಿದ್ದಾರೆ; ಸದನ ಪ್ರಾರಂಭವಾದ ಬಳಿಕ ಈ ಬಿಲ್ ಚರ್ಚೆಗೆ ಒತ್ತಾಯಿಸುವುದಾಗಿ ಹೇಳಿದರು. 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದು ಅಶೋಕ್ ಅವರು ಗಮನ ಸೆಳೆದುದಾಗಿ ಹೇಳಿದರು.
ನನಗೆ ಬೆದರಿಕೆ ಹಾಕಲು ಬರಬೇಡಿ
ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ 8 ತಿಂಗಳಿಂದ ಈ ಕಾಂಗ್ರೆಸ್ ಸರಕಾರ ಗೌರವಧನ ಕೊಟ್ಟಿಲ್ಲ. ಕಾರಣ ಏನು? ಖಜಾನೆ ಖಾಲಿಯೇ ಅಲ್ಲವೇ? ಯಾವನಿಗೋ ದಬ್ಬಾಳಿಕೆ, ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಬರಬೇಡಿ ಎಂದು ಎಚ್ಚರಿಸಿದರು. ನಾನೊಬ್ಬ ಜನಪ್ರತಿನಿಧಿ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷ ಎಂದು ಗಮನಕ್ಕೆ ತಂದರು.
ಖಜಾನೆ ಖಾಲಿ ಎಂದರೆ ಸಿಟ್ಟೇಕೆ?
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರದ ಕುರಿತು ತಮ್ಮ ಬಾಯಲ್ಲಿ ಮಾತನಾಡದೇ ಇರುವುದು ಒಳ್ಳೆಯದು ಎಂದು ಕಿವಿಮಾತು ಹೇಳಿದರು. ರಾಜ್ಯದ ರಾಜಕೀಯದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರೆಂದು ಕೇಳಿದರೆ ಕಾಂಗ್ರೆಸ್ ಪಕ್ಷದವರು ಹೆಸರು ಹೇಳುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಎರಡೂವರೆ ವರ್ಷ ಕಳೆದರೂ 2.5 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಮಾಡಿಲ್ಲ; ಗುಂಡಿಗಳನ್ನು ಮುಚ್ಚಿಲ್ಲ; ಜಗಳೂರು ತಾಲ್ಲೂಕಿನ ನಿರುದ್ಯೋಗಿ ಯುವಕ ಅಂಜಿನಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಳ ಮೀಸಲಾತಿ ನೆಪದಲ್ಲಿ ಹುದ್ದೆ ಮಾಡುತ್ತಿಲ್ಲ ಎಂದು ದೂರಿದರು. ಖಜಾನೆ ಖಾಲಿ ಎಂದರೆ ನಿಮಗೆ ಸಿಟ್ಟು ಬರುತ್ತದೆ ಎಂದು ಟೀಕಿಸಿದರು.
ಲಜ್ಜೆಗೆಟ್ಟ ಸರಕಾರದ ಕ್ರಮ..
ಮುಖ್ಯಮಂತ್ರಿಗಳ ತವರು ಜಿಲ್ಲೆಯ ಚೈತ್ರಾ ಬಿ. ಎಂಬ ಯುವತಿ ಕೊಕ್ಕೋ ಸ್ಪರ್ಧೆಯಲ್ಲಿ 32 ಬಾರಿ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದವರು. ಅಕ್ಕಪಕ್ಕದ ರಾಜ್ಯಗಳು ಇಂಥ ಕೊಕ್ಕೋ ಪ್ರತಿಭೆಗೆ 1 ಕೋಟಿ, 2 ಕೋಟಿ ಪ್ರಶಸ್ತಿ ಕೊಟ್ಟಿವೆ. ಲಜ್ಜೆಗೆಟ್ಟ, ನಾಚಿಕೆಗೇಡಿನ ಕಾಂಗ್ರೆಸ್ ಸರಕಾರವು ಅಂಥ ಪ್ರತಿಭೆಗೆ ಕೇವಲ 5 ಲಕ್ಷ ಕೊಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆ ಯುವತಿ 5 ಲಕ್ಷವನ್ನು ಸರಕಾರದ ಮುಖಕ್ಕೆ ಬಿಸಾಕಿದ್ದಾಳೆ ಎಂದು ಗಮನ ಸೆಳೆದರು.