ಬೆಳಗಾವಿ, ಡಿ. 18 (DaijiworldNews/AA): ಬಿ.ಪಿ.ಎಲ್.ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ.ಸಿ.ಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿ.ಪಿ.ಎಲ್ ಕಾರ್ಡ್ದಾರರ ಆದಾಯ ಮಿತಿಯನ್ನು 1 ಲಕ್ಷ 20 ಸಾವಿರ ರೂಪಾಯಿಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂಪಾಯಿ ಕೂಲಿ ದೊರೆಯುತ್ತದೆ. ಇದರ ಆಧಾರದಲ್ಲಿ ಕೂಲಿ ಮಾಡುವವರ ಆದಾಯವೂ ವರ್ಷಕ್ಕೆ 1 ಲಕ್ಷ 80 ಸಾವಿರ ರೂಪಾಯಿಗೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್.ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸದ್ಯ ವೈದ್ಯಕೀಯ ಆಧಾರದಲ್ಲಿ ಮಾತ್ರ ಬಿ.ಪಿ.ಎಲ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.