ದೆಹಲಿ, ಡಿ. 18 (DaijiworldNews/AA): 2029ರ ವೇಳೆಗೆ ದೇಶದ ರಕ್ಷಣಾ ವಲಯದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಸ್ತುತ ದೇಶದ ರಕ್ಷಣಾ ಉತ್ಪಾದನೆ ಮೌಲ್ಯ 1.5 ಲಕ್ಷ ಕೋಟಿ ರೂಪಾಯಿಯಷ್ಟಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದರು. ದೇಶದ ರಕ್ಷಣಾ ರಫ್ತು ಮೌಲ್ಯ ಪ್ರಸ್ತುತ 25,000 ಕೋಟಿ ರೂಪಾಯಿಗಳಷ್ಟಿದ್ದು, 2029ರ ವೇಳೆಗೆ 50,000 ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ" ಎಂದು ಹೇಳಿದರು.
"ಜಾಗತಿಕ ರಕ್ಷಣಾ ನಾಯಕತ್ವ ಪಾತ್ರವನ್ನು ಭಾರತ ಮತ್ತಷ್ಟು ಚೈತನ್ಯದಿಂದ ನಿಭಾಯಿಸಲಿದೆ. ರಕ್ಷಣಾ ವಲಯದಲ್ಲಿ ಖಾಸಗಿ ಸಂಸ್ಥೆಗಳ ಪಾಲುದಾರಿಕೆ, ಪರವಾನಗಿ ನೀಡುವಲ್ಲಿ ಸರಳ ನೀತಿ, ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಅವಕಾಶ, ತಂತ್ರಜ್ಞಾನ ವರ್ಗಾವಣೆ ಮುಂತಾದ ಕ್ರಮಗಳ ಮೂಲಕ ಭಾರತ ಈ ಕ್ಷೇತ್ರದಲ್ಲಿ ಆತ್ಮ ನಿರ್ಭರತೆಯತ್ತ ಸಾಗುತ್ತಿದೆ" ಎಂದರು.