ಕೊಟ್ಟಾಯಂ, ಡಿ. 19 (DaijiworldNews/AA): ಇತ್ತೀಚೆಗೆ ಪ್ರಕಟವಾದ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕೇರಳದ ಪಾಲಾ ಮೂಲದ ಆಲ್ಫ್ರೆಡ್ ಥಾಮಸ್ ಅವರು ಕೇರಳ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವರು 33ನೇ ರ್ಯಾಂಕ್ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಮೂಲತಃ ಪಾಲಾದವರಾದ ಆಲ್ಫ್ರೆಡ್ ಅವರು ಜನಿಸಿದ್ದು ಮತ್ತು ಬೆಳೆದದ್ದೆಲ್ಲಾ ದೆಹಲಿಯಲ್ಲಿ. ದೆಹಲಿಯಲ್ಲೇ ಅವರ ಶಿಕ್ಷಣ ಮತ್ತು ಭವಿಷ್ಯದ ಕನಸುಗಳು ರೂಪುಗೊಂಡವು.
ದೆಹಲಿಯಲ್ಲಿ ಫ್ರೀಲಾನ್ಸ್ ಕನ್ಸಲ್ಟೆಂಟ್ ಆಗಿರುವ ಥಾಮಸ್ ಆಂಟೋನಿ ಮತ್ತು ಶಿಕ್ಷಕಿ ಟೆಸ್ಸಿ ಥಾಮಸ್ ದಂಪತಿಯ ಪುತ್ರನಾದ ಆಲ್ಫ್ರೆಡ್, ದೆಹಲಿಯ ಸೇಂಟ್ ಕೊಲಂಬಸ್ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ನಂತರ 2018 ರಲ್ಲಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪದವಿ ಪಡೆದರು. ಬಳಿಕ ಆಲ್ಫ್ರೆಡ್ ಅವರು ಯುಪಿಎಸ್ಸಿ ಪರೀಕ್ಷೆ ಬರೆಯಲು ಇಚ್ಛಿಸುತ್ತಾರೆ.
ಆಲ್ಫ್ರೆಡ್ ಅವರು ಮೊದಲ ನಾಲ್ಕು ಪ್ರಯತ್ನಗಳಲ್ಲಿ ಅವರು ವಿಫಲರಾಗಿದ್ದರು. ಅದರಲ್ಲಿ ಮೂರು ಬಾರಿ ಪ್ರಿಲಿಮ್ಸ್ ಹಂತದಲ್ಲೇ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಆದರೂ ಛಲಬಿಡದೆ ತಮ್ಮ ಸಿದ್ಧತೆ ಮುಂದುವರಿಸಿದರು. ಮುಖ್ಯ ಪರೀಕ್ಷೆಯಲ್ಲಿ ಅವರು 'ಗಣಿತ'ವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು.
ಫಲಿತಾಂಶ ಪ್ರಕಟವಾದ ನಂತರ ಮಾತನಾಡಿದ ಆಲ್ಫ್ರೆಡ್, ತಮ್ಮ ಸುದೀರ್ಘ ಪಯಣದಲ್ಲಿ ಬೆಂಬಲವಾಗಿ ನಿಂತ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಸಹೋದರಿ ಎಂಜೆಲಾ ಥಾಮಸ್ ಪ್ರಸ್ತುತ ಸಿಎ ಆರ್ಟಿಕಲ್ಶಿಪ್ ಮಾಡುತ್ತಿದ್ದಾರೆ. ತಮಗೆ ಕೇರಳ ಕೆಡರ್ನಲ್ಲಿ ತರಬೇತಿ ಪಡೆದು, ಅಲ್ಲಿಯೇ ಸೇವೆ ಸಲ್ಲಿಸುವ ಆಸೆಯಿದೆ ಎಂದು ಆಲ್ಫ್ರೆಡ್ ತಿಳಿಸಿದ್ದಾರೆ.