ಬೆಂಗಳೂರು, ಡಿ. 20 (DaijiworldNews/AA): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ತರಲು ಹೊರಟಿದೆ ಎಂದು ಕೇಂದ್ರ ಎಂಎಸ್ಎಂಇ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.

"ನಿನ್ನೆ ಮುಕ್ತಾಯಗೊಂಡ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಯಿತು. ಆದರೆ ಅದನ್ನು ಬಿಟ್ಟು ಕರ್ನಾಟಕ ದ್ವೇಷ ಭಾಷಣ ಮತ್ತು ದೇಷ ಅಪರಾಧಗಳ ವಿಧೇಯಕ ಮಂಡನೆಗೆ ಸೀಮಿತವಾಗಿದೆ. ಯಾವ ಉದ್ದೇಶದಿಂದ ಮಸೂದೆ ತಂದಿದ್ದಾರೆ ಎನ್ನುವುದು ಅರ್ಥವಾಗದ ಸಂಗತಿ. ಆದರೆ ವಿರೋಧ ಪಕ್ಷಗಳ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ" ಎಂದರು.
"ರಾಜ್ಯ ಸರ್ಕಾರ ತಂದಿರುವ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಸಮ್ಮತಿ ನೀಡದಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ವಿಧೇಯಕವನ್ನು ರಾಷ್ಟ್ರಪತಿಗಳು ಕಳುಹಿಸುವಂತೆ ಮನವಿ ಮಾಡಿದ್ದು, ರಾಷ್ಟ್ರಪತಿಗಳ ಬಳಿಗೂ ತೆರಳಿ ವಿಧೇಯಕಕ್ಕೆ ಸಮ್ಮತಿ ನೀಡದಂತೆ ಮನವಿ ಮಾಡಲಾಗುವುದು" ಎಂದು ತಿಳಿಸಿದರು.
"ರಾಜ್ಯದಲ್ಲಿ ಹೊಸದಾಗಿ ಫ್ಯಾಕ್ಟ್ ಚೆಕ್ ಏಜೆನ್ಸಿಯನ್ನು ಆರಂಭಿಸಲಾಗಿದೆ. ಇದರ ಜವಾಬ್ದಾರಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೊಟ್ಟಿದ್ದಾರೆ. ವರ್ಷಕ್ಕೆ 3 ರಿಂದ 4 ಕೋಟಿ ಏಜೆನ್ಸಿ ಖರ್ಚು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿರುದ್ಧವಾಗಿ ಮಾತನಾಡುವವರ ಮೇಲೆ ದೂರು ದಾಖಲಿಸುವುದು ಇದರ ಉದ್ದೇಶವಾಗಿದೆ. ಇದುವರೆಗೆ 35 ಜನರ ಮೇಲೆ ದೂರು ದಾಖಲಿಸಲಾಗಿದೆ" ಎಂದು ಕಿಡಿಕಾರಿದರು.