ನವದೆಹಲಿ, ಡಿ. 20 (DaijiworldNews/AA): ಕೇಂದ್ರ ಸರ್ಕಾರವು MNREGA (ನರೇಗಾ) ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ದುರ್ಬಲಗೊಳಿಸುತ್ತಿದೆ. 20 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ MNREGA ಯೋಜನೆ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಮತ್ತು ಘನತೆಯನ್ನು ಒದಗಿಸಿದೆ. ಕೊವಿಡ್ ಬಿಕ್ಕಟ್ಟಿನ ಸಮಯದಲ್ಲಿ MNREGA ಹಲವರ ಜೀವ ಉಳಿಸಿದೆ, ಕುಟುಂಬಕ್ಕೆ ಆಧಾರವಾಗಿದೆ. ಆದರೆ ಮೋದಿ ಸರ್ಕಾರವು ಯಾವುದೇ ಸಮಾಲೋಚನೆಯಿಲ್ಲದೆ ಅದನ್ನು ಬದಲಾಯಿಸಿತು. ಸರ್ಕಾರವು MNREGA ಅನ್ನು ಬುಲ್ಡೋಜರ್ ಮೂಲಕ ನಾಶಮಾಡಿದೆ. ಇದರ ವಿರುದ್ಧ ನಾವು ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ವಿಬಿಜಿ ರಾಮ್ಜಿ ಮಸೂದೆಗೆ ಸಂಬಂಧಿಸಿದಂತೆ ವಿಡಿಯೋ ಸಂದೇಶ ನೀಡಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಯಾರನ್ನೂ ಸಂಪರ್ಕಿಸದೆ ಕೇಂದ್ರ ಸರ್ಕಾರ MNREGA ರಚನೆಯನ್ನು ಬದಲಾಯಿಸುತ್ತಿದೆ ಎಂದು ಹೇಳಿದ್ದಾರೆ.
"ಸಹೋದರ ಸಹೋದರಿಯರೇ… ನಮಸ್ಕಾರ. 20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ MNREGA ಕಾನೂನನ್ನು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು ಎಂದು ನನಗೆ ಇನ್ನೂ ನೆನಪಿದೆ. ಇದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಲಕ್ಷಾಂತರ ಗ್ರಾಮೀಣ ಕುಟುಂಬಗಳು ಇದರಿಂದ ಪ್ರಯೋಜನ ಪಡೆದವು. ಇದು ಜೀವನೋಪಾಯದ ಮೂಲವಾಯಿತು. ಅದರಲ್ಲೂ ವಿಶೇಷವಾಗಿ ವಂಚಿತರು, ಶೋಷಿತರು, ಬಡವರು ಮತ್ತು ಅತ್ಯಂತ ಬಡವರಿಗೆ ಇದರಿಂದ ಅನುಕೂಲವಾಯಿತು" ಎಂದಿದ್ದಾರೆ.
"ಜನರು ತಾಯ್ನಾಡು, ಗ್ರಾಮ, ಮನೆ ಮತ್ತು ಕುಟುಂಬದಿಂದ ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದನ್ನು ಈ ಯೋಜನೆಯಿಂದ ನಿಲ್ಲಿಸಲಾಯಿತು. ಉದ್ಯೋಗಕ್ಕೆ ಕಾನೂನುಬದ್ಧ ಹಕ್ಕುಗಳನ್ನು ನೀಡಲಾಯಿತು. ಗ್ರಾಮ ಪಂಚಾಯಿತಿಗಳಿಗೆ ಸಬಲೀಕರಣ ಮಾಡಲಾಯಿತು. MNREGA ಮೂಲಕ, ಭಾರತದಲ್ಲಿ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವತ್ತ ದೃಢವಾದ ಹೆಜ್ಜೆ ಇಡಲಾಯಿತು" ಎಂದು ತಿಳಿಸಿದರು.
"ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರವು MNREGA ಅನ್ನು ದುರ್ಬಲಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು, ಬಡವರು ಮತ್ತು ಅಂಚಿನಲ್ಲಿರುವವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ. ಕೊವಿಡ್ ಸಮಯದಲ್ಲಿ ಈ ಯೋಜನೆ ಬಡವರಿಗೆ ಜೀವನಾಡಿಯಾಗಿದ್ದರೂ, ಕೇಂದ್ರ ಸರ್ಕಾರದ ಈ ನಿರ್ಧಾರ ತುಂಬಾ ದುರದೃಷ್ಟಕರ" ಎಂದು ವಾಗ್ದಾಳಿ ನಡೆಸಿದರು.
"ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಲ್ಲದೆ ಯಾವುದೇ ಚರ್ಚೆಯಿಲ್ಲದೆ, ಸಮಾಲೋಚನೆಯಿಲ್ಲದೆ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ MNREGA ಯೋಜನೆಯ ರಚನೆಯನ್ನೇ ನಿರಂಕುಶವಾಗಿ ಬದಲಾಯಿಸಲಾಗಿದೆ" ಎಂದು ನುಡಿದರು.
"ಈ ಮೂಲಕ ಮೋದಿ ಸರ್ಕಾರವು ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ ಎಂದು ಅವರು ಹೇಳಿದರು. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಗ್ರಾಮೀಣ ಬಡವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ" ಎಂದು ಕಿಡಿಕಾರಿದರು.
"MNREGA ಜಾರಿಗೆ ತರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಆದರೆ ಇದು ಎಂದಿಗೂ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರಲಿಲ್ಲ. ಇದು ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಯೋಜನೆಯಾಗಿತ್ತು. ಈ ಕಾನೂನನ್ನು ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರವು ಲಕ್ಷಾಂತರ ರೈತರು, ಕಾರ್ಮಿಕರು ಮತ್ತು ಭೂಹೀನ ಗ್ರಾಮೀಣ ಬಡವರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯನ್ನು ಎದುರಿಸಲು ನಾವೆಲ್ಲರೂ ಸಿದ್ಧರಿದ್ದೇವೆ" ಎಂದರು.
"20 ವರ್ಷಗಳ ಹಿಂದೆ, ನಾನು ನನ್ನ ಬಡ ಸಹೋದರ ಸಹೋದರಿಯರಿಗೆ ಉದ್ಯೋಗ ಹಕ್ಕುಗಳನ್ನು ಪಡೆಯಲು ಹೋರಾಡಿದೆ. ಇಂದಿಗೂ, ಈ ಕರಾಳ ಕಾನೂನಿನ ವಿರುದ್ಧ ಹೋರಾಡಲು ನಾನು ಬದ್ಧಳಾಗಿದ್ದೇನೆ. ನನ್ನಂತಹ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಲಕ್ಷಾಂತರ ಕಾರ್ಮಿಕರು ಈ ಹೋರಾಟದಲ್ಲಿ ಜೊತೆಯಾಗಲಿದ್ದಾರೆ" ಎಂದು ಹೇಳಿದರು.