ಪುಣೆ, ಡಿ. 21 (DaijiworldNews/AA): ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿಗೆ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಾರೆ. ಅಂತಹ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತಮ ರ್ಯಾಂಕ್ ಪಡೆದ ಶಿವಂಶ್, ತಮ್ಮ ಕುಟುಂಬ ಮತ್ತು ಗ್ರಾಮಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ಅಡೆತಡೆಗಳ ನಡುವೆಯೂ ಕನಸು ಕಾಣುವ ಯುವಜನತೆಗೆ ಇವರ ಸಾಧನೆ ಸ್ಫೂರ್ತಿಯಾಗಿದೆ.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೂಲೆ ಎಂಬ ಪುಟ್ಟ ಗ್ರಾಮದ 22 ವರ್ಷದ ಇಂಜಿನಿಯರಿಂಗ್ ಪದವೀಧರ ಶಿವಂಶ್ ಸುಭಾಷ್ ಜಗದೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
2024ರ ಯುಪಿಎಸ್ಸಿ ಫಲಿತಾಂಶದಲ್ಲಿ ಇವರು ಅಖಿಲ ಭಾರತ ಮಟ್ಟದಲ್ಲಿ 26ನೇ ರ್ಯಾಂಕ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಯಾವುದೇ ಕೋಚಿಂಗ್ ಪಡೆಯದೆ ತಮ್ಮ ಮೊದಲ ಪ್ರಯತ್ನದಲ್ಲೇ ಶಿವಂಶ್ ಈ ಸಾಧನೆ ಮಾಡಿದ್ದಾರೆ.
ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಶಿವಂಶ್, "ಸಮಾಜಕ್ಕೆ ಸೇವೆ ಸಲ್ಲಿಸುವುದು ನನ್ನ ಬಹುದಿನದ ಕನಸಾಗಿತ್ತು. ಆ ಗುರಿಯನ್ನು ತಲುಪಲು ಯುಪಿಎಸ್ಸಿ ಅತ್ಯುತ್ತಮ ವೇದಿಕೆ ಎಂದು ನಾನು ನಂಬಿದ್ದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವವೇ ನನ್ನ ಈ ಯಶಸ್ಸಿನ ಹಿಂದಿನ ರಹಸ್ಯ," ಎಂದು ಸಂತಸ ಹಂಚಿಕೊಂಡಿದ್ದಾರೆ.