ಗುವಾಹಟಿ, ಡಿ. 21 (DaijiworldNews/AA): ಅಸ್ಸಾಂ ಅನ್ನು ತುಷ್ಟೀಕರಣ ಮತ್ತು ಮತಬ್ಯಾಂಕ್ ರಾಜಕೀಯದ ವಿಷದಿಂದ ರಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಸ್ಸಾಂನ ದಿಬ್ರುಗಢದಲ್ಲಿ 10,601 ಕೋಟಿ ರೂಪಾಯಿಗಳ ಬ್ರೌನ್ಫೀಲ್ಡ್ ಅಮೋನಿಯಾ-ಯೂರಿಯಾ ಸ್ಥಾವರಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿ ನೇತೃತ್ವದ 'ಡಬಲ್ ಎಂಜಿನ್ ಸರ್ಕಾರ' ದಶಕಗಳಿಂದ ನಿರ್ಲಕ್ಷ್ಯ ಮತ್ತು ನೀತಿ ವೈಫಲ್ಯಗಳನ್ನು ಕಂಡಿದ್ದ ಅಸ್ಸಾಂ ರಾಜ್ಯವನ್ನು ಸರಿಪಡಿಸುತ್ತಿದೆ. ರಾಜ್ಯದ ಗುರುತು ಮತ್ತು ಗೌರವವನ್ನು ರಕ್ಷಿಸಲು ಬಿಜೆಪಿ ಅವರೊಂದಿಗೆ ದೃಢವಾಗಿ ನಿಂತಿದೆ" ಎಂದರು.
"ಕಾಂಗ್ರೆಸ್ ಭಾರತ ವಿರೋಧಿ ಕಾರ್ಯಸೂಚಿ ಉತ್ತೇಜಿಸುತ್ತಿದೆ. ಅಸ್ಸಾಮ್ ಜನರ ಗುರುತು ಮತ್ತು ಆಕಾಂಕ್ಷೆಗಳ ಬಗ್ಗೆ ಅಸಡ್ಡೆ ಹೊಂದಿದೆ. ಕಾಂಗ್ರೆಸ್ಗೆ ಅಸ್ಸಾಂ ಮತ್ತು ಅದರ ಜನರ ಗುರುತಿನ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವರು ತಮ್ಮ ಸ್ವಹಿತಾಸಕ್ತಿಯನ್ನೇ ಹೊಂದಿದ್ದರು. ಇದರಿಂದಾಗಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೆಚ್ಚು ಇಷ್ಟಪಡುತ್ತಾರೆ. ಕಾಂಗ್ರೆಸ್ ಅವರನ್ನು ಉಳಿಸಲು ನೋಡುತ್ತಿದೆ. ಮತದಾರರ ಪಟ್ಟಿಯನ್ನು ಸರಿಪಡಿಸಲು ನಡೆಯುತ್ತಿರುವ ಪ್ರಕ್ರಿಯೆಯನ್ನು ಕಾಂಗ್ರೆಸ್ ವಿರೋಧಿಸಲು ಇದೇ ಕಾರಣ" ಎಂದು ಹೇಳಿದರು.
"ಈಗಲೂ ಕಾಂಗ್ರೆಸ್ ತನ್ನ ಮತಬ್ಯಾಂಕ್ ನ್ನು ಬಲಪಡಿಸಲು ಅಸ್ಸಾಂನ ಭೂಮಿ ಮತ್ತು ಕಾಡುಗಳಲ್ಲಿ ಬಾಂಗ್ಲಾದೇಶಿಯರು ನೆಲೆಸಲು ಬಯಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಅಸ್ಸಾಂ ಜನತೆ ನಾಶವಾದರೂ ಅವರು ಅದರಿಂದ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ತಮ್ಮ ಮತಬ್ಯಾಂಕ್ ಅನ್ನು ಬಲಪಡಿಸಲು ನೋಡುತ್ತಾರೆ" ಎಂದು ತಿಳಿಸಿದರು.