ನವದೆಹಲಿ, ಜು 16 (Daijiworld News/MSP): ರಾಜೀನಾಮೆ ವಿಚಾರವಾಗಿ ಸ್ಪೀಕರ್ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮೈತ್ರಿ ಸರ್ಕಾರದ ವಿರುದ್ದ ಅತೃಪ್ತಗೊಂಡು ರಾಜೀನಾಮೆ ನೀಡಿರುವ ಶಾಸಕರು ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದು, ಈ ವಿಚಾರವಾಗಿ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಸ್ಪೀಕರ್ ಸರ್ವೋಚ್ಚ ನ್ಯಾಯಾಲಯಕ್ಕೆ , ನಾನು ಯಾರಿಗೂ ಸವಾಲ್ ಹಾಕಿಲ್ಲ, ಸುಪ್ರೀಂ ಕೋರ್ಟಿಗಿಂತ ದೊಡ್ಡವನು ನಾನಲ್ಲ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಅತೃಪ್ತರು ರಾಜೀನಾಮೆ ವಿಚಾರವಾಗಿ ಸುಪ್ರೀಂಕೋರ್ಟ ಮೆಟ್ಟಿಲೇರಿದ್ದು, ಇಂದು ವಾದ ಪ್ರತಿವಾದಗಳ ಈ ವಿಚಾರವಾಗಿ ಸುಪ್ರೀಂ ಕೋರ್ಟ ನಡೆದಿತ್ತು ಈ ಎಲ್ಲಾ ಅಂಶಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸುವುದಾಗಿ ತಿಳಿಸಿದೆ.
ಅತೃಪ್ತ ಶಾಸಕರ ಪರವಾಗಿ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು ರಾಜೀನಾಮೆ ನೀಡಿರುವ ಶಾಸಕರ ಪೈಕಿ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಚಾರಣೆ ಬಾಕಿ ಇದೆ. ಆದರೆ, ಉಳಿದವರ ರಾಜೀನಾಮೆ ಯಾಕೆ ಅಂಗೀಕರಿಸುತ್ತಿಲ್ಲ? ರಾಜೀನಾಮೆ ಅಂಗೀಕಾರಕ್ಕೆ ತಡ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದರು.
ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮಂಡಿಸಿ, ರಾಜೀನಾಮೆ ಯಾವಾಗ ಕೊಟ್ಟಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಸ್ಪೀಕರ್ ಈಗಾಗಲೇ ಅಂಗೀಕಾರ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಕೆಲವು ಶಾಸಕರಿಗೆ ತಮ್ಮ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಶಾಸಕರ ಅನರ್ಹತೆ ಬಗ್ಗೆ ತೀರ್ಮಾನಿಸುವ ಹಕ್ಕು ಸ್ಪೀಕರ್ ಗೆ ಇದೆ. ರಾಜೀನಾಮೆಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದರು.
ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಪೀಠ, ನಾಳೆ ಬೆಳಗ್ಗೆ 10.30ಕ್ಕೆ ಆದೇಶ ನೀಡುವುದಾಗಿ ತಿಳಿಸಿದೆ.