ಬೆಂಗಳೂರು,ಜ. 10 (DaijiworldNews/AK): ಪಂಡಿತ್ ಜವಾಹರಲಾಲ್ ನೆಹರೂ ಅವರ ಒಪ್ಪಿಗೆಗೆ ವಿರುದ್ಧವಾಗಿ ಅಂದು ಐತಿಹಾಸಿಕ ಸೋಮನಾಥ ಮಂದಿರ ನಿರ್ಮಾಣವಾಗಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

“ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ” ತುಂಬಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಮನಾಥ ದೇವಾಲಯ ಒಂದು ಪುರಾತನ ದೇವಸ್ಥಾನ. ಸಾವಿರ ವರ್ಷಗಳ ಇತಿಹಾಸ ಉಳ್ಳದ್ದು ಎಂದು ವಿವರಿಸಿದರು.
ನಿರ್ಮಾಣ ಕಾರ್ಯ ಆದ ಬಳಿಕ 1951ರಲ್ಲಿ ದೇವಾಲಯವನ್ನು ಪುನರ್ ಸ್ಥಾಪನೆ ಮಾಡಿ, ಲೋಕಾರ್ಪಣೆಯ ಕೆಲಸ ಮಾಡಿದ್ದಾರೆ ಎಂದರು. ದೇಶದ 140 ಕೋಟಿ ಜನರು ಇವತ್ತು ಸೋಮನಾಥ ದೇವಾಲಯಕ್ಕೆ ಭಕ್ತಿ, ಶ್ರದ್ಧೆಯಿಂದ ತೆರಳುತ್ತಾರೆ; ಪೂಜೆ ಸಲ್ಲಿಸುತ್ತಾರೆ ಎಂದು ಗಮನಕ್ಕೆ ತಂದರು. ಇವತ್ತು ಬಿಜೆಪಿ ಅಷ್ಟೇ ಅಲ್ಲ; ಹಿಂದೂಗಳು ಇಡೀ ದೇಶದಲ್ಲಿ ಈ ದೇವಾಲಯದ ಪುನರ್ ನಿರ್ಮಾಣದ ನಿಮಿತ್ತವಾಗಿ ಎಲ್ಲರೂ ತಮ್ಮ ತಮ್ಮ ಊರುಗಳಲ್ಲಿ ಶಿವನ ಪೂಜೆ ಮಾಡಿಸುತ್ತಾರೆ. ಅದೇ ರೀತಿ ನಮ್ಮ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ ಇವತ್ತು ಪೂಜೆ ಮಾಡಿಸಿದ್ದೇವೆ. ಶ್ರದ್ಧೆಯಿಂದ- ಭಕ್ತಿಯಿಂದ ನಾವೆಲ್ಲ ಓಂ ನಮಃಶಿವಾಯ ಎಂದು ಧ್ಯಾನ ಮಾಡಿದ್ದೇವೆ. ಭಗವಂತ ಎಲ್ಲರಿಗೂ ಒಳಿತನ್ನು ಕೊಡಲಿ; ಲೋಕ ಕಲ್ಯಾಣ ಆಗಲಿ ಎಂದು ಪ್ರಾರ್ಥಿಸಿದರು.