ಲಕ್ನೋ, ಜ. 10 (DaijiworldNews/AA): ಬಿಜೆಪಿ ಸರ್ಕಾರ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಮಹಿಳೆಯರ ವಿರುದ್ಧದ ಅಪರಾಧಗಳು, ಸೈಬರ್ ಕ್ರೈಂಗಳು ಮತ್ತು ಭ್ರಷ್ಟಾಚಾರಗಳು ರಾಜ್ಯದಾದ್ಯಂತ ತೀವ್ರವಾಗಿ ಹೆಚ್ಚಾಗಿವೆ. ಈ ಸರ್ಕಾರದ ಅಡಿಯಲ್ಲಿ ಜನರ ಸುರಕ್ಷತೆಗೆ ಯಾವುದೇ ಭರವಸೆ ಇಲ್ಲ ಎಂದು ಮಾಜಿ ಸಿಎಂ, ಸಂಸದ ಅಖಿಲೇಶ್ ಯಾದವ್ ಟೀಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರದ 'ಜೀರೋ ಟಾಲರೆನ್ಸ್' ನೀತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಪ್ರತಿದಿನ ಐದು ಮಹಿಳೆಯರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಅತ್ಯಾಚಾರದ ನಾಚಿಕೆಗೇಡಿನ ಘಟನೆಗಳು ಸಂಭವಿಸುತ್ತವೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮುಖ್ಯಮಂತ್ರಿಯನ್ನು 2027 ರಲ್ಲಿ ರಾಜ್ಯದ ಜನರು ಅಧಿಕಾರದಿಂದ ಹೊರಹಾಕುತ್ತಾರೆ" ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ನಡೆದ ಎಸ್ಐಆರ್ ಕುರಿತು ಮಾತನಾಡಿದ ಅವರು, "ಎಸ್ಐಆರ್ ಪ್ರಕ್ರಿಯೆಯನ್ನು ಯಾವ ಪಕ್ಷವೂ ವಿರೋಧಿಸಿಲ್ಲ. ಪ್ರಮುಖ ಸಮಾಜದ ವೋಟ್ಗಳನ್ನು ಕಡಿಮೆ ಮಾಡಿ, ತಮ್ಮ ವೋಟ್ಗಳನ್ನು ಹೆಚ್ಚಿಸುವ ಸಂಚು ನಡೆಯುತ್ತಿದೆ. ಈ ಸಂಚನ್ನು ತಡೆಯಲು ವೋಟರ್ ಐಡಿಯನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು. ವೋಟ್ಗಳನ್ನು ಆಧಾರ್ಗೆ ಜೋಡಿಸಿದರೆ ಮಾತ್ರ ವೋಟ್ ಮೋಸವನ್ನು ತಪ್ಪಿಸಬಹುದು. ಇದು ಪಿಡಿಎ ಸಮಾಜದ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುತ್ತದೆ" ಎಂದು ತಿಳಿಸಿದರು.
"ಮತದಾರರ ಪಟ್ಟಿ ಇನ್ನೂ ಬಿಡುಗಡೆಯಾಗದೇ ಇದ್ದಾಗ, ಎಷ್ಟು ಮತಗಳು ಅಳಿಸಿಹೋಗುತ್ತವೆ ಎಂದು ಯಾರಿಗೂ ತಿಳಿದಿರದಿದ್ದಾಗ, ಮುಖ್ಯಮಂತ್ರಿಗಳು ತಮ್ಮ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಅಧಿಕಾರಿಗಳಿಗೆ ಸುಮಾರು ನಾಲ್ಕು ಕೋಟಿ ಮತಗಳು ಅಳಿಸಿಹೋಗುತ್ತವೆ ಎಂದು ಹೇಳುತ್ತಾರೆ. ಈ ಹೇಳಿಕೆಗೆ ದಾಖಲೆ ಎಲ್ಲಿದೆ? ಈ ಅಂಕಿ ಅಂಶವನ್ನು ಈಗಾಗಲೇ ನಿರ್ಧರಿಸಿದಾಗ, ಈ ಸಂಪೂರ್ಣ ಪ್ರಕ್ರಿಯೆಯು ಎಷ್ಟು ನ್ಯಾಯಯುತವಾಗಿದೆ" ಎಂದು ಪ್ರಶ್ನಿಸಿದರು.