ಬೆಂಗಳೂರು,ಜ. 10 (DaijiworldNews/AK): ಕೇಂದ್ರ ಸರಕಾರದ ಯೋಜನೆಗಳ ಕುರಿತು ತಪ್ಪು ಮಾಹಿತಿ ನೀಡಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

“ಗೋಲ್ಡ್ ಫಿಂಚ್ ಹೊಟೇಲ್” ನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ವಿಬಿ ಜಿ ರಾಮ್ ಜಿ ಯೋಜನೆ ಜಾರಿಯ ಮೂಲಕ ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಗ್ರಾಮೀಣ ಅಭಿವೃದ್ಧಿ ಕನಸು ನನಸಾಗಿಸಲು ಮುಂದಾದುದು ತಪ್ಪೇ ಎಂದು ಕೇಳಿದರು.
ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಏಳೆಂಟು ಲಕ್ಷ ಕೋಟಿ ಖರ್ಚು ಮಾಡುವ ಈ ಯೋಜನೆ ಸುಲಲಿತವಾಗಿ ಸಾಗಬೇಕು; ಬಡವರಿಗೆ ತಲುಪಬೇಕೆಂದು ಪ್ರಧಾನಿಯವರು ಆಲೋಚಿಸಿದ್ದೇ ತಪ್ಪೇ ಹಾಗಿದ್ದರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಹತ್ತಾರು ವರ್ಷ ಆಡಳಿತ ಮಾಡಿದಾಗ ಸ್ಕೀಂ ಬಗ್ಗೆ ಯೋಚಿಸಿಲ್ಲ; ಸ್ಕ್ಯಾಮ್ ಬಗ್ಗೆಯೇ ಅವರು ಯೋಚಿಸಿದರು ಎಂದು ಟೀಕಿಸಿದರು. ಜಿ ರಾಮ್ ಜಿ ಮೂಲಕ ಮೋದಿಜೀ ಅವರು ಒಂದು ಚಾರಿತ್ರಿಕ ನಿರ್ಧಾರ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಆದರೆ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.ಯೋಜನೆಯನ್ನು ಮರು ಜಾರಿ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ಯಾವತ್ತು ಮಹಾತ್ಮ ಗಾಂಧೀಜಿ ಅವರನ್ನು ಗೌರವಿಸಿರಲಿಲ್ಲ ಎಂಬುದು ದೇಶಕ್ಕೇ ಗೊತ್ತಿರುವ ಸಂಗತಿ. ಅಲ್ಲದೇ ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೂ ಗೌರವಿಸುತ್ತಿರಲಿಲ್ಲ ಎಂದು ಟೀಕಿಸಿದರು.