ಚಾಮರಾಜನಗರ, ಜ. 10 (DaijiworldNews/ AK): ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಕೊನೆಗೂ ಸಿಹಿ ಸುದ್ದಿ ಲಭಿಸಿದೆ. ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಮುಂದಾಗಿದ್ದು, ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

2021ರ ಮೇ 3ರಂದು ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತ 36 ರೋಗಿಗಳು ಮೃತಪಟ್ಟಿದ್ದ, ಈ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು 26 ಜನರಿಗೆ ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.