ಬೆಂಗಳೂರು, ಜ. 12 (DaijiworldNews/AA): ಜಿರಾಮ್ಜಿ ವಿಚಾರದಲ್ಲಿ ಕಾಂಗ್ರೆಸ್ ಹೋರಾಟ ನಿಲ್ಲಲ್ಲ, ಇಲ್ಲಿಗೆ ಬಿಡಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಕೆ ನೀಡಿದ ಅವರು, "ನಾನು ಯಾರ ಹೇಳಿಕೆಗೂ ರಿಯಾಕ್ಟ್ ಮಾಡಲ್ಲ. ಆದರೆ ಜಿ ರಾಮ್ ಜಿ ವಿರುದ್ಧ ಹೋರಾಟ ನಿಲ್ಲಲ್ಲ. ನಾವು ಇದನ್ನು ಇಲ್ಲಿಗೆ ಬಿಡಲ್ಲ. ಮನ್ರೇಗಾ ರೈಟು ವರ್ಕ್ ಕಾರಣಕ್ಕಾಗಿ ಕೊಡುಗೆ ಕೊಟ್ಟಿದ್ದು. ಮನಮೋಹನ್ ಸಿಂಗ್ ತಂದ ಕಾನೂನು ಬಡವರ ಹೊಟ್ಟೆ ತುಂಬಿಸುವುದಕ್ಕೆ ತಂದ ಯೋಜನೆ. ಆದರೆ ಇವರು ಬಡವರಿಗೆ ಸಹಾಯ ಮಾಡುವ ಕಾನೂನಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ಪಂಚಾಯಿತಿಯಲ್ಲಿ ನಡೆಯುವ ಕೆಲಸಗಳಿಗೆ ಅಡ್ಡಗಾಲು ಹಾಕುವ ಯೋಜನೆ ಮಾಡ್ತಿದ್ದಾರೆ. 60:40 ಶೇರ್ ಅಂತ ರಾಜ್ಯದ ಮೇಲೆ 30% ಹೆಚ್ಚಿನ ಭಾರವನ್ನು ಹಾಕ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಬಡವರಿಗೆ ಸಿಗೋದನ್ನ ನಿಲ್ಲಿಸಬೇಕು ಅನ್ನೋದು ಅವರ ಉದ್ದೇಶ. ಇವರು ಏನೇ ಸ್ಪಷ್ಟನೆ ಕೊಟ್ಟರೂ ಕೂಡ ಅದು ಸರಿಯಲ್ಲ. ಯಾರು ಇದನ್ನ ಟೀಕೆ ಮಾಡ್ತಾರೋ, ಮನ್ರೇಗಾ ತೆಗಿಬೇಕು ಅಂತಾರೋ ಅವರ ಬಳಿಯೇ ಆಡಿಟ್ ಸಂಸ್ಥೆ ಇದೆ. ಅವರೇ ಮಾಡಿಸಲಿ. ಸಿಎಜಿ ವರದಿ ಪ್ರಕಾರ, ಇದರಿಂದ ಅಸೆಟ್ ಕ್ರಿಯೇಟ್ ಆಗಿದೆ ಅಂತ ಹೇಳಿದ್ದಾರೆ. ಇದಕ್ಕೆ ವಿರೋಧ ಮಾಡ್ತಾರೆ ಅಂದ್ರೆ ಬಿಜೆಪಿಗರು ಜನ ವಿರೋಧಿಗಳು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮೋದಿ ಬಡವರಿಗೆ ಸಹಾಯ ಮಾಡುವ ಬದಲು ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮನ್ರೇಗಾದಲ್ಲಿ ಹಣ ಕಡಿತ ಮಾಡಲು ಮುಂದಾಗಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ. ಈ ಹೋರಾಟ ಕೊನೆಯವರೆಗೂ ನಡೆಯುತ್ತದೆ. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.