ದೆಹಲಿ, ಜ. 12 (DaijiworldNews/AA): ದೇಶದಲ್ಲಿ ಮೀನು ಉತ್ಪಾದನೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ತಿಳಿಸಿದೆ.

2013-14ರ ಅವಧಿಯಲ್ಲಿ 95 ಲಕ್ಷ ಟನ್ ಗಳಿಷ್ಟಿದ್ದ ಮೀನು ಉತ್ಪಾದನೆ, ಇದೀಗ 2024-25ನೇ ಸಾಲಿನಲ್ಲಿ ಸುಮಾರು 198 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ. ಈ ಮೂಲಕ ಮೀನು ಉತ್ಪಾದನೆಯಲ್ಲಿ ಶೇಕಡ 106ಕ್ಕಿಂತ ಹೆಚ್ಚಿನ ಪ್ರಮಾಣದಷ್ಟು ಗಮನಾರ್ಹ ಬೆಳವಣಿಗೆ ಕಾಣಲಾಗಿದೆ ಎಂದು ಸಚಿವಾಲಯ ಹೇಳಿದೆ.
ಮೀನು ಮತ್ತು ಜಲಚರ ಸಾಕಣೆ ವಲಯವು ದೇಶದ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಅಲ್ಲದೆ, ಮೂರು ಕೋಟಿ ಮೀನುಗಾರರು ಮತ್ತು ಮೀನು ಸಾಕಣೆದಾರರಿಗೆ ಜೀವನೋಪಾಯ ಕಲ್ಪಿಸಿದೆ. ಭಾರತ ಇಂದು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಗೆ ಪ್ರತಿಶತ ೮ರಷ್ಟು ಕೊಡುಗೆ ನೀಡುತ್ತದೆ ಎಂದು ಹೇಳಲಾಗಿದೆ.
ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ಪರಿವರ್ತನಾತ್ಮಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ನೀಲಿ ಕ್ರಾಂತಿ, ಪ್ರಧಾನಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ 2024-25ನೇ ಸಾಲಿನಿಂದ 32 ಸಾವಿರದ 723 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟಾರೆ 2024-25ರಲ್ಲಿ ಭಾರತದ ಸಮುದ್ರಾಹಾರ ರಫ್ತು ಸಾರ್ವಕಾಲಿಕ ಗರಿಷ್ಠ ಮೌಲ್ಯ 62 ಸಾವಿರದ 408 ಕೋಟಿ ರೂಪಾಯಿಗೆ ತಲುಪಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.