ತಿರುವನಂತಪುರಂ, ಜ. 12 (DaijiworldNews/TA): ಕೇರಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಿ ಮುಖ್ಯಮಂತ್ರಿಯನ್ನು ನೇಮಿಸುವುದು ಅಂತಿಮ ಗುರಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಬಿಜೆಪಿ ರಾಜ್ಯ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಶಾ, ಪಕ್ಷವು ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿಗೆ ದಾರಿ ಮಾಡಿಕೊಡುವುದಾಗಿ ಹೇಳಿದರು.

“ಕೇರಳವನ್ನು ರಾಷ್ಟ್ರವಿರೋಧಿ ಶಕ್ತಿಗಳಿಂದ ರಕ್ಷಿಸುವುದು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವುದು ಬಿಜೆಪಿ ಗುರಿಯಾಗಿದ್ದು, ಪಕ್ಷವು ಸರ್ಕಾರದಲ್ಲಿ ಭಾಗವಹಿಸಿದರೆ ಅಭಿವೃದ್ಧಿ ಸಾಧಿಸಲಾಗುವುದು.” ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಹೊಸದಾಗಿ ಆಯ್ಕೆಯಾದ ಸ್ಥಳೀಯ ಸರ್ಕಾರಿ ಪ್ರತಿನಿಧಿಗಳನ್ನು ಅಭಿನಂದಿಸಿದ ಅಮಿತ್ ಶಾ, ತಿರುವನಂತಪುರಂ ಕಾರ್ಪೊರೇಷನ್ನ ಫಲಿತಾಂಶವನ್ನು ರಾಜ್ಯದಲ್ಲಿ ಪಕ್ಷದ ವಿಶಾಲ ರಾಜಕೀಯ ಗುರಿಗಳತ್ತ ಹೆಜ್ಜೆ ಎಂದು ಬಣ್ಣಿಸಿದರು. ಶಾ, ಕೇರಳದ ದೀರ್ಘಕಾಲೀನ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವುದರೊಂದಿಗೆ ಭದ್ರತೆ ಮತ್ತು ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.
ಅಮಿತ್ ಶಾ ಎಲ್ಡಿಎಫ್ ಮತ್ತು ಯುಡಿಎಫ್ ಕುರಿತು ಮಾತನಾಡಿ “ಎಲ್ಡಿಎಫ್ ಮತ್ತು ಯುಡಿಎಫ್ ಭ್ರಷ್ಟಾಚಾರದಿಂದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ. ಸತತ ಸರ್ಕಾರಗಳು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದ್ದು, ಇದು ರಾಜ್ಯದ ಭವಿಷ್ಯಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತಿದೆ, ಅಭಿವೃದ್ಧಿ, ಭದ್ರತೆ ಮತ್ತು ನಂಬಿಕೆಯ ರಕ್ಷಣೆಯನ್ನು ಎಲ್ಡಿಎಫ್ ಅಥವಾ ಯುಡಿಎಫ್ ಮೂಲಕ ಸಾಧಿಸಲು ಸಾಧ್ಯವಿಲ್ಲ. ಬಿಜೆಪಿ ಮಾತ್ರ ಕೇರಳದ ಭವಿಷ್ಯಕ್ಕಾಗಿ ಸ್ಪಷ್ಟ ಪರ್ಯಾಯವನ್ನು ನೀಡುತ್ತಿದೆ ಎಂದರು.