ಬೆಂಗಳೂರು, ಜ. 13 (DaijiworldNews/TA): ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಗರಿಗೆದರಿರುವ ನಡುವೆಯೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿ ಹೆಸರು ಕೇಳಿಬರುತ್ತಿರುವ ಈ ಇಬ್ಬರು ನಾಯಕರ ಭೇಟಿ ಮತ್ತು ಚರ್ಚೆ ಹಲವು ಊಹಾಪೋಹಗಳಿಗೆ ಆಹಾರವಾಗಿದೆ.

ಡಿಕೆ ಶಿವಕುಮಾರ್ ನಿವಾಸದಲ್ಲಿ ಸುಮಾರು 15 ನಿಮಿಷಗಳ ಕಾಲ ಪರಮೇಶ್ವರ್ ಹಾಗೂ ಡಿಸಿಎಂ ನಡುವೆ ಸಮಾಲೋಚನೆ ನಡೆಯಿತು. ಬಳಿಕ ಡಿಸಿಎಂ ಅವರು ಪರಮೇಶ್ವರ್ ಅವರನ್ನು ಕಾರಿನವರೆಗೂ ಕಳುಹಿಸಿಕೊಟ್ಟರು. ಈ ಭೇಟಿಯ ಸಮಯ ಮತ್ತು ಹಿನ್ನೆಲೆ ರಾಜಕೀಯವಾಗಿ ಮಹತ್ವ ಪಡೆದಿದೆ.
ಆದರೆ ಈ ಭೇಟಿಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್, ಇದು ಸಂಪೂರ್ಣವಾಗಿ ಅಧಿಕೃತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಭೇಟಿ ಎಂದು ತಿಳಿಸಿದ್ದಾರೆ. ಜನವರಿ 16 ರಿಂದ 22ರವರೆಗೆ ತುಮಕೂರಿನಲ್ಲಿ ನಡೆಯಲಿರುವ ‘ಕರ್ನಾಟಕ ಕ್ರೀಡಾಕೂಟ’ಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಆಹ್ವಾನಿಸಲು ಬಂದಿದ್ದೆ ಎಂದು ಅವರು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಒಲಂಪಿಕ್ ಸಂಸ್ಥೆಯ ಸಹಯೋಗದಲ್ಲಿ ಈ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ನಾಯಕತ್ವ ಬದಲಾವಣೆ ಕುರಿತ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. “ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಆಹ್ವಾನ ನೀಡಲು ಬಂದಿದ್ದೆ. ಅವರು ಕೂಡ ಸಮಯ ನೋಡಿಕೊಂಡು ಒಂದು ದಿನ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಈ ಕ್ರೀಡಾಕೂಟದಲ್ಲಿ ಸುಮಾರು 8,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 27 ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜನವರಿ 16ರಂದು ಮುಖ್ಯಮಂತ್ರಿ ಉದ್ಘಾಟನೆ ಮಾಡಲಿದ್ದಾರೆ. 22ರಂದು ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲರು ಭಾಗವಹಿಸಲಿದ್ದಾರೆ” ಎಂದು ವಿವರಿಸಿದರು.
ರಾಹುಲ್ ಗಾಂಧಿ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, “ರಾಹುಲ್ ಗಾಂಧಿ ತಮಿಳುನಾಡಿಗೆ ಹೋಗುತ್ತಿದ್ದಾರೆ. ಸೌಜನ್ಯಯುತವಾಗಿ ಭೇಟಿಯಾಗುತ್ತಾರೆ ಅಷ್ಟೇ. ಅದರಲ್ಲಿ ಬೇರೆ ಅರ್ಥ ಇಲ್ಲ” ಎಂದರು. ತಾವು ರಾಹುಲ್ ಗಾಂಧಿಯನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ, “ಅವಶ್ಯಕತೆ ಇದ್ದರೆ ಭೇಟಿಯಾಗುತ್ತೇನೆ. ಸುಮ್ಮನೆ ಯಾಕೆ ಹೋಗಬೇಕು? ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅಥವಾ ಮಲ್ಲಿಕಾರ್ಜುನ್ ಖರ್ಗೆ – ಯಾರನ್ನಾದರೂ ಯಾವಾಗ ಬೇಕಾದರೂ ಭೇಟಿಯಾಗಲು ನನಗೆ ಯಾವುದೇ ತೊಂದರೆ ಇಲ್ಲ” ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಗೊಂದಲಗಳಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, “ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಗೊಂದಲ ಎಂದು ಕರೆಯಲು ಸಾಧ್ಯವಿಲ್ಲ. ಎಲ್ಲವೂ ಸರಾಗವಾಗಿಯೇ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದರು. ಒಟ್ಟಾರೆ, ನಾಯಕತ್ವ ಬದಲಾವಣೆ ಕುರಿತ ಚರ್ಚೆ ಜೋರಾಗಿರುವ ಸಮಯದಲ್ಲೇ ನಡೆದ ಈ ಭೇಟಿ ರಾಜಕೀಯವಾಗಿ ಗಮನ ಸೆಳೆದಿದ್ದರೂ, ಅಧಿಕೃತವಾಗಿ ಇದು ಕ್ರೀಡಾಕೂಟದ ಆಹ್ವಾನಕ್ಕೆ ಸಂಬಂಧಿಸಿದದ್ದೇ ಎಂಬುದಾಗಿ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.