ಚೆನ್ನೈ, ಜ. 13 (DaijiworldNews/TA): ಪ್ರಾಮಾಣಿಕತೆ ಎನ್ನುವುದು ಮಾತಲ್ಲ, ಅದು ಜೀವನದ ಮೌಲ್ಯ. ಸ್ವಾರ್ಥ ಸಮಾಜದಲ್ಲಿ ಇತ್ತೀಚೆಗೆ ಪ್ರಾಮಾಣಿಕತೆ ಅನ್ನೋದು ಮರೆಮಾಚಿದೆ. ಆದರೆ ಇದೀಗ ಮಹಿಳೆಯೊಬ್ಬಳು ನಿಷ್ಠೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ಧಾಳೆ.


ನಗರದಲ್ಲಿ ಕಸ ಸ್ವಚ್ಛಗೊಳಿಸುವ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಪೌರಕಾರ್ಮಿಕ ಮಹಿಳೆಯೊಬ್ಬರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರ ತನಿಖೆಯ ಬಳಿಕ ಈ ಬಂಗಾರದ ಗಂಟು ಅದರ ಅಸಲಿ ಮಾಲೀಕರಿಗೆ ಮರಳಿದೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಎಂಬ ಮಹಿಳೆ ಭಾನುವಾರ ಬೆಳಿಗ್ಗೆ ಟಿ.ನಗರದ ಮುಪ್ಪತ್ತಮ್ಮನ್ ಕೋವಿಲ್ ರಸ್ತೆಯಲ್ಲಿ ಎಂದಿನಂತೆ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಪ್ಲಾಸ್ಟಿಕ್ ಕವರ್ ಅವರ ಗಮನ ಸೆಳೆದಿದೆ. ಅನುಮಾನದಿಂದ ಅದನ್ನು ತೆರೆದು ನೋಡಿದಾಗ ಒಳಗೆ ಅಧಿಕ ಪ್ರಮಾಣದ ಚಿನ್ನದ ಆಭರಣಗಳಿರುವುದು ಕಂಡುಬಂದಿದೆ. ಇದರಿಂದ ಅಚ್ಚರಿಗೊಂಡ ಪದ್ಮಾ, ಯಾವುದೇ ಆಸೆಗೆ ಒಳಗಾಗದೆ ತಕ್ಷಣವೇ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತೆರಳಿ ಆ ಚೀಲವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು ಸುಮಾರು 360 ಗ್ರಾಂ ಚಿನ್ನದ ಆಭರಣಗಳಿರುವುದು ಪತ್ತೆಯಾಗಿದೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ 45 ಲಕ್ಷ ರೂಪಾಯಿಗಳಿಗೂ ಅಧಿಕ ಎಂದು ತಿಳಿದುಬಂದಿದೆ.
ಇದೇ ಸಮಯದಲ್ಲಿ ನಂಗನಲ್ಲೂರು ನಿವಾಸಿ ರಮೇಶ್ ಎಂಬವರು ತಮ್ಮ 45 ಸವರನ್ ಅಂದರೆ 360 ಗ್ರಾಂ ಚಿನ್ನ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಹಳೆ ಚಿನ್ನದ ವ್ಯಾಪಾರಿಯಾಗಿರುವ ರಮೇಶ್, ಶನಿವಾರ ಸಂಜೆ ಟಿ.ನಗರಕ್ಕೆ ಸ್ನೇಹಿತನನ್ನು ಭೇಟಿಯಾಗಲು ಬಂದಾಗ ರಸ್ತೆ ಬದಿಯ ತಳ್ಳುಗಾಡಿಯ ಬಳಿ ಚಿನ್ನದ ಚೀಲವನ್ನು ಇಟ್ಟು ಮರೆತು ಹೋಗಿದ್ದರು. ಪೊಲೀಸರು ದೂರು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ, ರಮೇಶ್ ಅವರೇ ಚಿನ್ನದ ಅಸಲಿ ಮಾಲೀಕರು ಎಂದು ಖಚಿತಪಡಿಸಿಕೊಂಡು, ಬಂಗಾರದ ಆಭರಣಗಳನ್ನು ಅವರಿಗೆ ಹಸ್ತಾಂತರಿಸಿದರು.
ಪೌರಕಾರ್ಮಿಕ ಮಹಿಳೆ ಪದ್ಮಾ ಅವರ ಈ ಅಪರೂಪದ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು, “ಪ್ರಾಮಾಣಿಕತೆ ಎನ್ನುವುದು ಮಾತಲ್ಲ, ಅದು ಜೀವನದ ಮೌಲ್ಯ” ಎಂದು ಪದ್ಮಾ ಅವರನ್ನು ಅಭಿನಂದಿಸಿದ್ದಾರೆ. ಅವರ ನಿಷ್ಠೆಯನ್ನು ಗೌರವಿಸಿ, ಸ್ವತಃ ಮುಖ್ಯಮಂತ್ರಿಗಳೇ ಪದ್ಮಾ ಅವರನ್ನು ಸನ್ಮಾನಿಸಿದ್ದಾರೆ. ಈ ಘಟನೆ ಸಮಾಜಕ್ಕೆ ಪ್ರೇರಣೆಯಾಗಿದೆ.