ನವದೆಹಲಿ, ಜ. 13 (DaijiworldNews/AA): ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಜನವರಿ 20 ರಂದು ಪಕ್ಷದ ಪೂರ್ಣ ಪ್ರಮಾಣದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಇನ್ನು ಅಧ್ಯಕ್ಷರ ಚುನಾವಣೆಗೆ ನಾಮನಿರ್ದೇಶನಗಳು ಜನವರಿ 19 ರಂದು ನಡೆಯಲಿದ್ದು, ಮರುದಿನ ಚುನಾವಣೆ ನಡೆಯಲಿದೆ ಎಂದು ಪಕ್ಷದ ಮೂಲದಿಂದ ತಿಳಿದುಬಂದಿದೆ.
ಡಿಸೆಂಬರ್ 15 ರಂದು ನಬಿನ್ ಅವರನ್ನು ಬಿಜೆಪಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಅಧಿಕೃತ ಆದೇಶ ಹೊರಡಿಸಿದ್ದರು. ಪ್ರಸ್ತುತ ನಿತಿನ್ ನಬಿನ್ ಅವರು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಬಿನ್ ಅವರ ತಂದೆ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಜನಸಂಘದ ಮಾಜಿ ಸದಸ್ಯ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 2 ದಶಕಗಳ ರಾಜಕೀಯ ಅನುಭವ ಹೊಂದಿರುವ ನಬಿನ್ ಐದು ಬಾರಿ ಬಂಕಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಜೊತೆಗೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ನಬಿನ್ ಅವರು ಬಿಹಾರ ಮತ್ತು ಪೂರ್ವ ಭಾರತದಿಂದ ಆಯ್ಕೆಯಾದ ಮೊದಲ ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ.