ತುಮಕೂರು, ಜ. 13 (DaijiworldNews/TA): ಜಿಲ್ಲಾಮಟ್ಟದ ಏಕೈಕ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಹೆಸರನ್ನು ನಾಮಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹೊರಾಂಗಣ ಕ್ರೀಡಾಂಗಣದ ಮುಂಬಾಗದಲ್ಲಿರುವ ಒಳಾಂಗಣ ಸ್ಟೇಡಿಯಂಗೆ ಬೇರೆ ನಾಮಫಲಕ ಇರದಿದ್ದರೂ, ಅದು “ಮಹಾತ್ಮ ಗಾಂಧೀ ಇಂಡೋರ್ ಸ್ಟೇಡಿಯಂ” ಎಂದು ಕರೆಯಲಾಗುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆ ದಿಢೀರ್ ಆಗಿ ಈ ಒಳಾಂಗಣ ಕ್ರೀಡಾಂಗಣಕ್ಕೆ “ಡಾ. ಜಿ. ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣ” ಎಂಬ ನಾಮಫಲಕ ಅಳವಡಿಸಲಾಗಿದ್ದು, ಇದರಿಂದ ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರ ಸಂಜೆ ನೂರಾರು ಬಿಜೆಪಿ ಕಾರ್ಯಕರ್ತರು ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಸಿದರು. ಅವರು ದ್ವಾರದ ಬಳಿಯೇ ಕುಳಿತು ಪ್ರತಿಭಟನೆ ನಡೆಸಿದ್ದು, ನಾಮಫಲಕ ತೆರವಿಗೆ ಮುಂದಾಗುತ್ತಿದ್ದಂತೆ ಜಟಾಪಟಿಯೇ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. 30ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡರು. ಈ ಸ್ಟೇಡಿಯಂನಲ್ಲಿ ಜನವರಿ 16 ರಿಂದ 22 ರವರೆಗೆ ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟ ನಡೆಯಲಿದ್ದು, ತುರ್ತಾಗಿ ನಾಮಫಲಕ ಬದಲಾವಣೆ ಮಾಡಿ ವಿವಾದ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಗಾಂಧಿ ಹೆಸರು ಬದಲಾವಣೆ ಮಾಡಲು ಆಗುತ್ತಾ? ಮಹಾತ್ಮ ಗಾಂಧೀಜಿ ಸ್ಟೇಡಿಯಂಗೆ ಇರುವ ಹೆಸರು ತೆಗೆಯುತ್ತಾರೆ ಎಂದರೆ ಅದು ಹುಚ್ಚರು ಹೇಳುವ ಮಾತು ಎಂದಿದ್ದಾರೆ. ಅಲ್ಲಿ ಶೆಡ್ ಇದೆ, ಅದನ್ನು ಒಳಾಂಗಣ ಕ್ರೀಡಾಂಗಣ ಮಾಡಿದ್ದಾರೆ. ಅದಕ್ಕೆ ಡಾ.ಪರಮೇಶ್ವರ್ ಹೆಸರು ಇಡುವಂತೆ ಪತ್ರ ಬರೆದಿದ್ದರು. ಆ ವಿಚಾರಕ್ಕೆ ಅವರು ರಾಜಕೀಯ ಮಾಡೋಕೆ ಹೊರಟರೆ ಹೇಗೆ? ಕ್ರೀಡಾಂಗಣಕ್ಕೆ ಮಹಾತ್ಮ ಗಾಂಧೀಜಿ ಹೆಸರು ತೆಗೆಯಲು ಆಗುತ್ತಾ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.